ಸಾಲದ ಖಾತೆಯ ಹಣ ಅಕ್ರಮವಾಗಿ ವರ್ಗಾಯಿಸಿ ವಂಚನೆ: ದೂರು.
ಬ್ರಹ್ಮಾವರ, ಡಿ.9: ಬ್ರಹ್ಮಾವರ ಮಿಲಾಗ್ರಿಸ್ ಕೋಆಪರೇಟಿವ್ ಸೊಸೈಟಿಯ ಮ್ಯಾನೇಜರ್, ಉದ್ಯೋಗಿ ಸಹಿತ ಇತರರು ಸೇರಿ ಅಕ್ರಮವಾಗಿ ಸಾಲದ ಖಾತೆ ಯನ್ನು ತೆರೆದು ಅದರಿಂದ ಹಣವನ್ನು ಇನ್ನೊಬ್ಬರ ಖಾತೆಗೆ ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ವೆ ನಿವಾಸಿ ಚಂದ್ರ ನಾಯ್ಕ(30) ಎಂಬವರು ತಂಗಿಯ ಮದುವೆಯ ಉದ್ದೇಶಕ್ಕಾಗಿ ಬ್ರಹ್ಮಾವರ ಮಿಲಾಗ್ರಿಸ್ ಸೊಸೈಟಿಯಿಂದ ಸಾಲ ತೆಗೆ ಯಲು ಗಣೇಶ್ ಎಂಬಾತನೊಂದಿಗೆ ಹೋಗಿದ್ದು, ಅಲ್ಲಿ ಮ್ಯಾನೇಜರ್ ಭಾಗ್ಯಲಕ್ಷ್ಮೀ ಹಾಗೂ ಅಲ್ಲಿನ ಉದ್ಯೋಗಿ ನಿರಂಜನ್, ಕೆಲವು ದಾಖಲೆಗಳಿಗೆ ಸಹಿ ಮಾಡಿಸಿ, ಕೆನರಾ ಬ್ಯಾಂಕಿನ ಬೆಳ್ವೆ ಶಾಖೆಯ ಚೆಕ್‌ಗಳನ್ನು ಪಡೆದುಕೊಂಡು, ಕೆಲವು ದಿನಗಳಲ್ಲಿ ಖಾತೆಗೆ 2,50,000ರೂ. ಜಮೆ ಮಾಡುವುದಾಗಿ ತಿಳಿಸಿದ್ದರು.
ತಿಂಗಳುಗಳೇ ಕಳೆದರೂ ಖಾತೆಗೆ ಹಣ ಜಮೆಯಾಗದ ಕಾರಣ ಬ್ಯಾಂಕ್‌ಗೆ ಹೋಗಿ ವಿಚಾರಿಸಿದ್ದು, ಆಗ ಸಾಲ ಅನುಮೋದನೆಯಾಗಿಲ್ಲ ಎಂದು ತಿಳಿಸ ಲಾಗಿತ್ತು. ಆದರೆ ನ.30ರಂದು ಸಾಲದ ಕಂತನ್ನು ಪಾವತಿಸದಿದಕ್ಕೆ ಚಂದ್ರ ನಾಯ್ಕಗೆ ನೋಟೀಸ್ ಜಾರಿ ಮಾಡಲಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಗಣೇಶ, ಭಾಗ್ಯಲಕ್ಷ್ಮೀ, ನಿರಂಜನರವರು ಸೇರಿಕೊಂಡು ಚಂದ್ರ ಅವರ ಹೆಸರಿನಲ್ಲಿ ಖಾತೆಯನ್ನು ತೆರೆದು ಖಾತೆಯಿಂದ ಹಣವನ್ನು ಗಣೇಶ್ ಖಾತೆಗೆ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.