ಜಮ್ಮುಕಾಶ್ಮೀರ: ಎನ್‌ಕೌಂಟರ್ ನಲ್ಲಿ ಮೂವರು ಉಗ್ರರ ಹತ್ಯೆ

Update: 2020-12-10 04:14 GMT

ಶ್ರೀನಗರ, ಡಿ.10: ಮೂವರು ಉಗ್ರಗಾಮಿಗಳು ಬುಧವಾರ ದಕ್ಷಿಣ ಕಾಶ್ಮೀರದಲ್ಲಿ ಸೇನೆ ನಡೆಸಿದ ಭಯೋತ್ಪಾದಕ ನಿಗ್ರಹ  ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ. ಕಾರ್ಯಾಚರಣೆ ವೇಳೆ ಒಬ್ಬ ನಾಗರಿಕನಿಗೂ ಗಾಯಗಳಾಗಿವೆ.

ಈ ನಡುವೆ ಉಗ್ರರು ಉತ್ತರ ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ ನಡೆಸಿದ ಗ್ರೆನೇಡ್ ದಾಳಿಯಲ್ಲಿ ಕನಿಷ್ಠ ಆರು ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ಸಶಸ್ತ್ರ ಸೀಮಾ ಬಲ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನದತ್ತ ಉಗ್ರರು ಗ್ರೆನೇಡ್ ಎಸೆದಿದ್ದು, ಗುರಿ ತಪ್ಪಿ ಸಿಂಗಾಪುರ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆಬದಿ ಸ್ಫೋಟಗೊಂಡಿತು ಎಂದು ಅಧಿಕೃತ ಮೂಲಗಳು ಹೇಳಿವೆ.

ಉಗ್ರರು ಅವಿತಿರುವ ಬಗ್ಗೆ ಗುಪ್ತಚರ ದಳ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಮುಂಜಾನೆ ಸೇನೆಯ 55ಆರ್, ಸಿಆರ್‌ಪಿಎಫ್ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಪುಲ್ವಾಮಾದ ಟಿಕೆನ್ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಆಗ ಮನೆಯೊಂದರಲ್ಲಿ ಅವಿತಿದ್ದ ಉಗ್ರರನ್ನು ಶೋಧ ತಂಡ ಬೆನ್ನಟ್ಟಿತು. ಆಗ ಉಗ್ರರು ತಂಡದತ್ತ ಗುಂಡು ಹಾರಿಸಿದರು. ಪ್ರತಿಯಾಗಿ ಸೇನೆ ನಡೆಸಿದ ಎನ್‌ಕೌಂಟರ್‌ನಲ್ಲಿ ಮನೆಯ ಮಾಲಕ ಝಮೀರ್ ಸಿದ್ದೀಕ್ ಲೋನ್ ಗಾಯಗೊಂಡಿದ್ದು, ಮೂವರು ಉಗ್ರರು ಹತರಾರದು ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.

ಮೃತರನ್ನು ಅಲ್ ಬದ್ರ್ ಎಂಬ ಉಗ್ರಗಾಮಿ ಸಂಘಟನೆಗೆ ಸೇರಿದವರೆಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News