×
Ad

ಸಿಜೆಐ ತಾಯಿಗೆ 2.5 ಕೋಟಿ ರೂ. ವಂಚನೆ: ಕುಟುಂಬದ ಉಸ್ತುವಾರಿದಾರನ ಬಂಧನ

Update: 2020-12-09 22:27 IST

ನಾಗಪುರ, ಡಿ.9: ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ಅವರ ತಾಯಿಗೆ, 2.5 ಕೋಟಿ ರೂ. ಹಣವನ್ನು ವಂಚಿಸಿದ ಆರೋಪದಲ್ಲಿ ಅವರ ಕುಟುಂಬದ ಆಸ್ತಿಯ ಉಸ್ತುವಾರಿದಾರನೊಬ್ಬನನ್ನು ಬಂಧಿಸಲಾಗಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಆರೋಪಿ ತಪಸ್ ಘೋಷ್ (49) ನನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಡಿಸಿಪಿ ವಿನಿತಾ ಸಾಹು ಮೇಲ್ವಿಚಾರಣೆಯಲ್ಲಿ ನಾಗಪುರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಬೋಬ್ಡೆ ಅವರ ಕುಟುಂಬವು ಆಕಾಶವಾಣಿ ಚೌಕದ ಸಮೀಪದ ತಮ್ಮ ನಿವಾಸಕ್ಕೆ ತಾಗಿಕೊಂಡಿರುವ ಜಾಗದಲ್ಲಿ ಸೇಡನ್ ಲಾನ್ ಎಂಬ ಭವನವನ್ನು ಹೊಂದಿದ್ದು, ಅದನ್ನು ವಿವಿಧ ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡಲಾಗುತ್ತಿತ್ತು.

ಸಿಜೆಐ ಅವರ ವಯೋವೃದ್ಧ ತಾಯಿ ಮುಕ್ತಾ ಬೋಬ್ಡೆ ಅವರು ಈ ಆಸ್ತಿಯ ಮಾಲಕಿಯಾಗಿದ್ದು, ಅವರ ಕುಟುಂಬವು ಸ್ಥಳೀಯ ಫ್ರೆಂಡ್ಸ್ ಕಾಲನಿಯ ನಿವಾಸಿ ತಪಸ್ ಘೋಷ್ ಎಂಬಾತನನ್ನು ಅದರ ಉಸ್ತುವಾರಿಗೆ ನೇಮಿಸಿತ್ತು. ಕಳೆದ 10 ವರ್ಷಗಳಿಂದ ಘೋಷ್ ಆ ಕಟ್ಟಡ ನಿವೇಶನದ ಆಡಳಿತ ನಿರ್ವಹಣೆ ಮಾಡುತ್ತಿದ್ದ ಮತ್ತು ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮುಕ್ತಾ ಬೋಬ್ಡೆ ಅವರ ವೃದ್ಧಾಪ್ಯ ಹಾಗೂ ಅನಾರೋಗ್ಯವನ್ನು ದುರುಪಯೋಗಪಡಿಸಿಕೊಂಡ ಘೋಷ್, ಸೇಡನ್ ಲಾನ್‌ನ ಬಾಡಿಗೆ ಪಾವತಿಗಳ ರಸೀತಿಗಳನ್ನು ಫೋರ್ಜರಿ ಮಾಡಿ, 2.5 ಕೋಟಿ ರೂ. ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ವಂಚನೆ ಬೆಳಕಿಗೆ ಬಂದ ಬಳಿಕ ಪೊಲೀಸರು ಅರ್ಥಿಕ ಅಪರಾಧ ದಳದ ಸಿಬ್ಬಂದಿ ಒಳಗೊಂಡಿರುವ ವಿಶೇಷ ತನಿಖಾ ತಂಡ ರಚಿಸಿ ತನಿಖೆ ಆರಂಭಿಸಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆರೋಪಿ ಘೋಷ್‌ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News