×
Ad

ಇ.ಡಿ. ದುರ್ಬಳಕೆ ಆರೋಪ : ಪಿಎಫ್‌ಐ ಪ್ರತಿಭಟನೆ

Update: 2020-12-10 20:17 IST

ಉಡುಪಿ, ಡಿ.10: ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಸರಕಾರವನ್ನು ವಿರೋಧಿಸುವ ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಸಂಘಟನೆ ಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಇತರ ಸರಕಾರಿ ಏಜೆನ್ಸಿಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಪಾಪ್ಯುಲರ್ ಫ್ರಂಟ್ ನಾಯಕರ ನಿವಾಸಗಳು ಹಾಗೂ ಕಚೇರಿಗಳ ಮೇಲೆ ಇ.ಡಿ. ನಡೆಸಿರುವ ದಾಳಿಗಳು ಇದರ ಮುಂದುವರಿದ ಭಾಗವೆಂಬುದು ಸ್ಪಷ್ಟವಾಗಿದೆ ಎಂದು ಉಡುಪಿ ಜಿಲ್ಲಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಎಜೆನ್ಸಿಯು ಈಗ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿಲ್ಲ, ಬದಲಾಗಿ ಬಿಜೆಪಿಯ ಅಸ್ತ್ರವಾಗಿ ಕಾರ್ಯಾಚರಿಸುತ್ತಿದೆ ಎಂಬುದನ್ನು ಈ ದಾಳಿ ತೋರಿಸಿ ಕೊಟ್ಟಿದೆ. ಬಿಜೆಪಿಯ ಜನವಿರೋಧಿ ನೀತಿ, ಸಿದ್ಧಾಂತಗಳ ವಿರುದ್ಧ ರಾಜಿ ಇಲ್ಲದ ನಿಲುವು ಹೊಂದಿರುವ ಕಾರಣಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಬೇಟೆಯಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮುಸ್ಲಿಮರು ಸೇರಿದಂತೆ ಮೂಲೆಗೆ ತಳ್ಳಲ್ಪಟ್ಟ ಎಲ್ಲಾ ಸಮುದಾಯಗಳ ಸಬಲೀಕರಣಕ್ಕಾಗಿ ದುಡಿಯುವ ಸಂಘಟನೆ ಯಾಗಿದೆ. ಸಾರ್ವಜನಿಕರ ದೇಣಿಗೆಯನ್ನು ಆಧರಿಸಿರುವ ಈ ಸಂಘಟನೆ, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಸರಕಾರಿ ನಿಯಮಗಳು ಹಾಗೂ ನಿಬಂಧನೆಗಳನ್ನು ಪಾಲಿಸುತ್ತಿದೆ ಎಂದವರು ಹೇಳಿದ್ದಾರೆ.

ಇ.ಡಿ. ಹಾಗೂ ಇತರ ಸರಕಾರಿ ಏಜೆನ್ಸಿಗಳು ಆಡಳಿತಾರೂಢ ಬಿಜೆಪಿ, ಆರೆಸ್ಸೆಸ್ ಅಥವಾ ಯಾವುದೇ ಸಂಘಟನೆ, ವ್ಯಕ್ತಿಗಳ ಕೈಯಲ್ಲಿ ಅಸ್ತ್ರವಾಗುವುದನ್ನು ವಿರೋಧಿಸಿ ಡಿ.11ರ ಶುಕ್ರವಾರ ರಾಜ್ಯಾದ್ಯಂತ ನಡೆಯುವ ಪ್ರತಿಭಟನೆಯ ಭಾಗವಾಗಿ ಉಡುಪಿ ಜಿಲ್ಲೆಯಲ್ಲೂ ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಗಿದೆ. ನಾಳೆ ಸಂಜೆ 4:30ಕ್ಕೆ ಅಜ್ಜರಕಾಡಿನಲ್ಲಿರುವ ಹುತಾತ್ಮ ಸ್ಮಾರಕದ ಎದುರು ಜಿಲ್ಲಾ ಪಿಎಫ್‌ಐ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News