ನ್ಯಾಯಾಲಯದ ಆದೇಶ ಪಾಲನೆಗೆ ಅಡ್ಡಿ : ಆರೋಪಿಗೆ ಶಿಕ್ಷೆ
ಉಡುಪಿ, ಡಿ.10: ನಗರದ ನ್ಯಾಯಾಲಯದ ಆದೇಶದಂತೆ ಡೆಲಿವರ್ ವಾರೆಂಟ್‌ನ್ನು ಜಾರಿ ಆಡಲು ಅವಕಾಶ ನೀಡದೇ, ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವ ಪ್ರಕರಣದಲ್ಲಿ ಆರೋಪಿ ಬಿ.ದಿನೇಶ್ ಹಿಂಬಾಳೆ ಎಂಬಾತನಿಗೆ ಆರು ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ದಂಡವನ್ನು ನ್ಯಾಯಾಲಯ ವಿಧಿಸಿ ಆದೇಶ ಹೊರಡಿಸಿದೆ.
ನ್ಯಾಯಾಲಯದ ಆದೇಶದಂತೆ ಆರೋಪಿ ವಾಸವಾಗಿರುವ ಶಿವಳ್ಳಿ ಗ್ರಾಮದ ತೆಂಕಪೇಟೆ ವಾರ್ಡಿನ ಬೊಬ್ಬರ್ಯ ಲೇನ್‌ನಲ್ಲಿರುವ ಮನೆಗೆ ತೆರಳಿದಾಗ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವುದಾಗಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಉಡುಪಿ ನಗರ ಠಾಣೆಯ ಪಿಎಸ್‌ಐ ಲಿಂಗರಾಜು ಹೆಚ್ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎಂ.ಎನ್. ಮಂಜುನಾಥ್, ಆರೋಪಿತನ ವಿರುದ್ಧದ ಆರೋಪವು ಸಾಬೀತಾಗಿದ್ದು, ಆರೋಪಿತನಿಗೆ ನ್ಯಾಯಾಲಯದ ಆದೇಶ ಪಾಲನೆಗೆ ಅಡ್ಡಿ ಉಂಟು ಮಾಡಿರುವುದಕ್ಕೆ ಆರು ತಿಂಗಳ ಕಾರಾಗೃಹ ಶಿಕ್ಷೆ ಮತ್ತು ತಲಾ 3000 ರೂ. ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ ಮತ್ತೆ 15 ದಿನಗಳ ಕಾರಾಗೃಹ ವಾಸದ ಶಿಕ್ಷೆ ನೀಡಿ ಡಿ.2ರಂದು ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದ್ದರು.