ಕಳವು ಪ್ರಕರಣ : ಆರೋಪಿಗೆ ನಾಲ್ಕು ವರ್ಷ ಜೈಲು ಶಿಕ್ಷೆ
ಮಂಗಳೂರು, ಡಿ.10: ವಿವಿಧ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ವರ್ಷದ ಹಿಂದೆ ಬಂಧಿತನಾಗಿದ್ದ ತಮಿಳುನಾಡು ಮೂಲದ ವ್ಯಕ್ತಿಗೆ 2ನೇ ಸಿಜೆಎಂ ನ್ಯಾಯಾಲಯವು ನಾಲ್ಕು ವರ್ಷ ಸಾದಾ ಜೈಲು ಶಿಕ್ಷೆಯನ್ನು ಬುಧವಾರ ಪ್ರಕಟಿಸಿತು.
ತಮಿಳುನಾಡು ಕೃಷ್ಣಗಿರಿ ನಿವಾಸಿ ಸೆಲ್ವಕುಮಾರ್ ಯಾನೆ ರಮೇಶ್ (32) ಶಿಕ್ಷೆಗೊಳಗಾದ ಆರೋಪಿ. ಈತ 2016ರ ಸೆಪ್ಟಂಬರ್ 14ರಂದು ಕಂಕನಾಡಿಯ ಮಳಿಗೆಯೊಂದರ ಬಾಗಿಲು ಮುರಿದು 24 ಸಾವಿರ ನಗದು, 2016ರ ನವೆಂಬರ್ 30ರಂದು ಕಂಕನಾಡಿಯ ಸೈಕಲ್ ಶಾಪ್ ವೊಂದರ 1ನೇ ಮಹಡಿಯಿಂದ 99,336 ರೂ. ಹಾಗೂ 2017ರ ಮಾರ್ಚ್ 9ರಲ್ಲಿ ಕಂಕನಾಡಿಯ ಕನ್‌ಸ್ಟ್ರಕ್ಷನ್ಸ್‌ವೊಂದರಿಂದ ಎರಡು ಮೊಬೈಲ್ ಕಳವು ಮಾಡಿದ್ದ ಎಂಬುದಾಗಿ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಸೆಲ್ವ ಕುಮಾರ್‌ನನ್ನು 2017ರ ಎಪ್ರೀಲ್ 2ರಂದು ತಡರಾತ್ರಿ ಕಂಕನಾಡಿ ಪರಿಸರದಲ್ಲಿ ಸಂಶಯಾಸ್ಪದವಾಗಿ ತಿರುಗಾಡುವಾಗ ಗಸ್ತಿನಲ್ಲಿದ್ದ ಕದ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಆತ ತನ್ನ ಕೃತ್ಯಗಳನ್ನು ಒಪ್ಪಿಕೊಂಡಿದ್ದ.
ಆಗಿನ ಕದ್ರಿ ಇನ್‌ಸ್ಪೆಕ್ಟರ್ ಮಾರುತಿ ನಾಯ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 2ನೇ ಸಿಜೆಎಂ ನ್ಯಾಯಾಧೀಶೆ ಪುಷ್ಪಲತಾ ಪ್ರಕರಣದ ವಿಚಾರಣೆ ಕೈಗೊಂಡರು.
ಪ್ರತಿಕೂಲ ಸಾಕ್ಷಿ: ವಿಚಾರಣೆ ವೇಳೆ ದೂರುದಾರರು ವಿಳಂಬವಾಗುತ್ತದೆ ಎಂದು ತಿಳಿದು ಪ್ರತಿಕೂಲ ಸಾಕ್ಷಿ ನುಡಿದಿದ್ದರು. ಆದರೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳನ ಕೃತ್ಯ ದಾಖಲಾಗಿರುವುದನ್ನು ಪರಿಗಣಿಸಿ ನ್ಯಾಯಾಧೀಶರು ಸೆಲ್ವಕುಮಾರ್‌ನನ್ನು ಅಪರಾಧಿ ಎಂದು ತೀರ್ಪಿತ್ತಿದ್ದಾರೆ.
ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ವಾದಿಸಿದ್ದರು.
ಎಪ್ರಿಲ್‌ವರೆಗೆ ಜೈಲಲ್ಲಿ: ಆರೋಪಿಯು ಕಳೆದ 2017 ಎಪ್ರಿಲ್‌ನಲ್ಲಿ ಬಂಧನವಾದಂದಿನಿಂದ ಇಲ್ಲಿಯವರೆಗೂ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ. ಈಗಾಗಲೇ ಮೂರು ವರ್ಷ ಕಳೆದಿದ್ದು, ನ್ಯಾಯಾಲಯ ವಿಧಿಸಿರುವ ಶಿಕ್ಷೆಯ ಪ್ರಕಾರ 2021 ಎಪ್ರಿಲ್ ತನಕ ಆತ ಜೈಲಿನಲ್ಲಿ ಇರಬೇಕಾಗುತ್ತದೆ.