×
Ad

ಡಿ. 17ರಿಂದ ಮಂಗಳೂರು ಸೆಂಟ್ರಲ್-ಮುಂಬೈ ನಡುವೆ ವಿಶೇಷ ರೈಲು

Update: 2020-12-10 21:12 IST

ಉಡುಪಿ, ಡಿ.10 : ಕೊಂಕಣ ರೈಲ್ವೆಯು ದಕ್ಷಿಣ ರೈಲ್ವೆಯ ಸಹಯೋಗ ದೊಂದಿಗೆ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ ಮುಂಬೈ- ಮಂಗಳೂರು ಸೆಂಟ್ರಲ್ ದೈನಂದಿನ ಸೂಪರ್ ಫಾಸ್ಟ್ ರೈಲಿನೊಂದಿಗೆ ತಿರುನಲ್ವೇಲಿ-ದಾದರ್-ತಿರುನಲ್ವೇಲಿ ನಡುವೆ ಸಾಪ್ತಾಹಿಕ ಸೂಪರ್ ‌ಫಾಸ್ಟ್ ರೈಲು ಓಡಲಿವೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಮಂಗಳೂರು ಸೆಂಟ್ರಲ್- ಮುಂಬೈ ನಡುವಿನ ರೈಲು ಸಂಚಾರ ಡಿ.17ರಿಂದ ಪ್ರಾರಂಭಗೊಂಡು ಜ.1ರವರೆಗೆ ಇರಲಿದೆ. ಇದು ಸಂಪೂರ್ಣ ವಾಗಿ ಕಾಯ್ದಿರಿಸಿದ ಬರ್ತ್, ಆಸನಗಳೊಂದಿಗೆ ಪ್ರತಿದಿನ ಓಡಾಡಲಿದೆ.

 ರೈಲು ನಂ.02620 ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ ಟರ್ಮಿನಸ್ ದೈನಂದಿನ ಸೂಪರ್‌ಫಾಸ್ಟ್ ಹಬ್ಬದ ವಿಶೇಷ ರೈಲು ಡಿ.17ರಿಂದ 31ರವರೆಗೆ ಪ್ರತಿದಿನ ಅಪರಾಹ್ನ 2:25ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6:35ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್ ತಲುಪಲಿದೆ.

ರೈಲು ನಂ.02619 ಲೋಕಮಾನ್ಯ ತಿಲಕ್ ಟರ್ಮಿನಸ್-ಮಂಗಳೂರು ಸೆಂಟ್ರಲ್ ದೈನಂದಿನ ಸೂಪರ್‌ಫಾಸ್ಟ್ ಹಬ್ಬದ ವಿಶೇಷ ರೈಲು ಡಿ.18ರಿಂದ ಜ.1ರವರೆಗೆ ಪ್ರತಿದಿನ ಅಪರಾಹ್ನ 3:20ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್ ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 7:30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ಈ ರೈಲಿಗೆ ಸುರತ್ಕಲ್, ಮುಲ್ಕಿ, ಉಡುಪಿ, ಕುಂದಾಪುರ, ಮುಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲ, ಕಾರವಾರ, ಮಡಗಾಂವ್ ಜಂಕ್ಷನ್, ಕುಡಾಲ್,ರತ್ನಗಿರಿ, ಚಿಪ್ಲುಣ್, ಪನ್ವೇಲ್ ಹಾಗೂ ಥಾಣೆ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಈ ರೈಲು ಒಟ್ಟು 20 ಕೋಚ್‌ಗಳನ್ನು ಹೊಂದಿದ್ದು, 2ಶ್ರೇಣಿ ಎಸಿ-1, 3ಶ್ರೇಣಿ ಎಸಿ-2 ಕೋಚ್‌ಗಳು, ಸ್ಲೀಪರ್-10 ಕೋಚ್‌ಗಳು, ಎರಡನೇ ಆಸನ-5 ಕೋಚ್‌ಗಳು, ಎಸ್‌ಎಲ್‌ಆರ್-2 ಹೊಂದಿರುತ್ತದೆ.

ತಿರುನಲ್ವೇಲಿ-ದಾದರ್: ತಿರುನಲ್ವೇಲಿ-ದಾದರ್-ತಿರುನಲ್ವೇಲಿ ಸಾಪ್ತಾಹಿಕ ಸೂಪರ್‌ಫಾಸ್ಟ್ ವಿಶೇಷ ರೈಲು ಡಿ.16ರಿಂದ 31ರವರೆಗೆ ಓಡಾಟ ನಡೆಸಲಿದೆ. ರೈಲು ನಂ.06072 ಡಿ.16, 23 ಮತ್ತು 30ರ ಬುಧವಾರದಂದು ತಿರುನ್ವೇಲಿಯಿಂದ ಬೆಳಗ್ಗೆ 7:15ಕ್ಕೆ ಹೊರಟು ಮರುದಿನ ಅಪರಾಹ್ನ 3 ಕ್ಕೆ ದಾದರ್ ತಲುಪಲಿದೆ.

ರೈಲು ನಂ.06071 ದಾದರ್‌ನಿಂದ ಡಿ.17, 24, 31ರ ಗುರುವಾರ ರಾತ್ರಿ 8:40ಕ್ಕೆ ಹೊರಟು, ಮೂರನೇ ದಿನ ಮುಂಜಾನೆ 4 ಗಂಟೆಗೆ ತಿರುನಲ್ವೇಲಿ ತಲುಪಲಿದೆ. ಈ ರೈಲಿಗೆ ಕರ್ನಾಟಕದಲ್ಲಿ ಕಾರವಾರ, ಹೊನ್ನಾವರ, ಉಡುಪಿ, ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆ ಇರುತ್ತದೆ.

ಈ ರೈಲು ಒಟ್ಟು 15 ಎಲ್‌ಎಚ್‌ಬಿ ಕೋಚ್‌ಗಳನ್ನು ಹೊಂದಿರುತ್ತದೆ. ಇವುಗಳಲ್ಲಿ 2ಶ್ರೇಣಿ ಎಸಿ-1ಕೋಚ್, 3ಶ್ರೇಣಿ ಎಸಿ-2ಕೋಚ್, ಸ್ವೀಪರ್ -7 ಕೋಚ್, ಎರಡನೇ ಆಸನ-3ಕೋಚ್, ಜನರೇಟರ್ ಕಾರು-2 ಇರುತ್ತದೆ.

ಪ್ರಯಾಣಿಕರು ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮಾಸ್ಕ್ ಧಾರಣೆ, ಸ್ವಚ್ಛತೆ, ಸುರಕ್ಷತಾ ಅಂತರಗಳನ್ನು ಕಾಯ್ದುಕೊಳ್ಳುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News