×
Ad

ಕಾರ್ಮಿಕರ ಖಾಯಂಗೊಳಿಸಲು ಒತ್ತಾಯ : ಡಿ.14ರಂದು ಮನಪಾ ಮುಂಭಾಗ ಪ್ರತಿಭಟನೆ

Update: 2020-12-10 22:06 IST

ಮಂಗಳೂರು, ಡಿ.10: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಒಳಚರಂಡಿ ವಿಭಾಗದ ಕಾರ್ಮಿಕರನ್ನು ಖಾಯಂಗೊಳಿಸಲು ಹಾಗೂ ಈ ಕುರಿತು ನಗರಾಭಿವೃದ್ಧಿ ಸಚಿವರು ಸಭೆ ಕರೆಯಬೇಕು ಎಂದು ಆಗ್ರಹಿಸಿ ಡಿ.14ರಂದು ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಯಲಿದೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಸುದ್ದಿಗಾರರೊದಿಂಗೆ ಮಾತನಾಡಿದ ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಪಾಂಡೇಶ್ವರ, ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದಲ್ಲೂ ಅಂದು ಬೆಳಗ್ಗೆ 10:30ರಿಂದ ಸಂಜೆ 5 ಗಂಟೆಗೆ ವರೆಗೆ ಪಂಪ್‌ಹೌಸ್ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರು ಜ.6 ಮತ್ತು ಸೆ.9ರಂದು ರಾಜ್ಯದ ಎಲ್ಲ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಲೋಡರ್ಸ್, ಕ್ಲೀನರ್ಸ್‌ ಮತ್ತು ಯುಜಿಡಿ ಹೆಲ್ಪರ್ಸ್‌ ಸ್ಥಾನಗಳನ್ನು ಭರ್ತಿ ಮಾಡಲು ವಿಶೇಷ ನೇಮಕಾತಿ ನಿಯಮಾವಳಿ ಪ್ರಕಟಿಸಿ, ಒಂದು ವಾರದೊಳಗೆ ಪಟ್ಟಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸಲು ಸುತ್ತೋಲೆ ಹೊರಡಿಸಿತ್ತು. ಆದರೆ, ಮಂಗಳೂರು ಮಹಾನಗರ ಪಾಲಿಕೆ ಕಳುಹಿಸಲು ಹಿಂದೇಟು ಹಾಕಿತ್ತು ಎಂದು ಹೇಳಿದರು.

ಸಂಘಟನೆಯ ಪ್ರತಿಭಟನೆ, ಒತ್ತಡದ ಹಿನ್ನೆಲೆಯಲ್ಲಿ ಕೇವಲ 106 ಕಾರ್ಮಿಕರ ಹೆಸರನ್ನು ಮಾತ್ರ ಕಳುಹಿಸಿದೆ. ಒಳಚರಂಡಿ ವಿಭಾಗದಲ್ಲಿ 214 ಮಂದಿ ಕಾರ್ಮಿಕರು ದುಡಿಯುತ್ತಿದ್ದು, ಕಳುಹಿಸಿದ ಪಟ್ಟಿಯಲ್ಲಿ 49 ಮಂದಿಯ ಹೆಸರು ಮಾತ್ರ ಇದೆ. ಉಳಿದ 57 ಮಂದಿ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಡಿ ದುಡಿಯುತ್ತಿರುವವರು ಎಂದು ಮಾಹಿತಿ ನೀಡಿದರು.

ಆ್ಯಂಟನಿ ಸಂಸ್ಥೆಯ ಕಾರ್ಮಿಕರ ಹೆಸರು ಕಳುಹಿಸಿರುವುದಕ್ಕೆ ವಿರೋಧವಿಲ್ಲ. ಆದರೆ ಒಳಚರಂಡಿ ವಿಭಾಗದ ಕಾರ್ಮಿಕರು 30 ವರ್ಷದಿಂದ ದುಡಿಯುತ್ತಿದ್ದು, ಆ್ಯಂಟನಿ ಸಂಸ್ಥೆ ಕಾರ್ಮಿಕರು ಕಳೆದ ಮೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಜತೆಗೆ ಯುಜಿಡಿ ಕಾರ್ಮಿಕರ ವೇತನ, ಪಿಎ್, ಇಎಸ್‌ಐ ಎಲ್ಲದರಲ್ಲೂ ಗುತ್ತಿಗೆದಾರರು ವಂಚನೆ ಮಾಡುತ್ತಿದ್ದಾರೆ. ಪಾಲಿಕೆ ಆಯುಕ್ತರು ತಕ್ಷಣ ಮರುಪರಿಶೀಲಿಸಿ ಸರಕಾರಕ್ಕೆ ಸರಿಯಾದ ಪಟ್ಟಿ ಸಲ್ಲಿಸಬೇಕು. ಸರಕಾರ ಕಾರ್ಮಿಕರ ಬೇಡಿಕೆಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಮಂಗಳೂರು ತಾಲೂಕು ಸಂಚಾಲಕ ಕೆ.ಚಂದ್ರ ಕಡಂದಲೆ, ಕಾರ್ಮಿಕ ವಿಭಾಗದ ಪ್ರಮುಖರಾದ ಪದ್ಮನಾಭ ವಾಮಂಜೂರು, ರಾಜೇಶ್ ಪೆರ್ನಾಜೆ, ರವೀಂದ್ರ ಕಟೀಲ್, ಗಜೇಂದ್ರ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News