ಕಾಪು ಕಲ್ಯ ಪರಿಸರದಲ್ಲಿ ಚಿರತೆ ಓಡಾಟ: ಹೆಜ್ಜೆಯ ಗುರುತು, ರಕ್ತದ ಕಲೆಗಳು ಪತ್ತೆ
ಕಾಪು, ಡಿ.14: ಕಾಪು ಪುರಸಭೆ ವ್ಯಾಪ್ತಿಯ ಕಲ್ಯ ಭಾರತ್ ನಗರ ಎಂಬಲ್ಲಿ ಚಿರತೆ ಓಡಾಟ ಕಂಡುಬಂದಿದ್ದು, ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಚಿರತೆಯನ್ನು ಸೆರೆಹಿಡಿಯಲು ಕಾರ್ಯಾಚರಣೆಗೆ ಇಳಿದಿರುವ ಅರಣ್ಯ ಇಲಾಖೆ ಕಲ್ಯ ಪರಿಸರದಲ್ಲಿ ನಾಯಿಯೊಂದಿಗೆ ಬೋನನ್ನು ಇರಿಸಿದೆ.
ಬೇಟೆಗಾಗಿ ಜನನಿಬಿಡ ಪ್ರದೇಶಕ್ಕೆ ಬಂದಿರುವ ಚಿರತೆಯು ಬೀದಿ ನಾಯಿಯೊಂದನ್ನು ಬಲಿ ಪಡೆದುಕೊಂಡಿದೆ ಎನ್ನಲಾಗಿದೆ. ಇದಕ್ಕೆ ಪುರಾವೆ ಎಂಬಂತೆ ಸ್ಥಳದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಮತ್ತು ಮನೆಯೊಂದರ ಅಂಗಳದಲ್ಲಿ ಹಾಗೂ ರಸ್ತೆಗಳಲ್ಲಿ ನಾಯಿಯ ರಕ್ತದ ಕಲೆಗಳು ಕಂಡುಬಂದಿವೆ.
ಡಿ.13ರಂದು ಮಧ್ಯರಾತ್ರಿ ವೇಳೆ ಸ್ಥಳೀಯರು ನೀಡಿದ ಮಾಹಿತಿಯಂತೆ ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ಅರಣ್ಯ ಇಲಾಖೆಯ ವಿಚಾರ ತಿಳಿಸಿದರು. ಮಧ್ಯರಾತ್ರಿ ಸ್ಥಳಕ್ಕೆ ಆಗಮಿಸಿದ ಕಾಪು ಉಪವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ ಹಾಗೂ ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್, ಸದಸ್ಯ ಅರುಣ್ ಶೆಟ್ಟಿ ಪಾದೂರು ಸ್ಥಳೀಯರೊಂದಿಗೆ ಸೇರಿ ಪರಿಶೀಲನೆ ನಡೆಸಿದ್ದಾರೆ.
‘ಹೆಜ್ಜೆ ಗುರುತಿನಿಂದ ಇದು ಚಿರತೆ ಎಂಬುದು ದೃಢಪಟ್ಟಿದೆ. ಈ ಚಿರತೆಯು ಬೀದಿ ನಾಯಿಯೊಂದನ್ನು ಹಿಡಿದು ಸುರಕ್ಷಿತ ಜಾಗಕ್ಕೆ ಕೊಂಡೊಯ್ದು ತಿಂದಿರುವ ಸಾಧ್ಯತೆ ಇದೆ. ಇದರಿಂದ ದಾರಿಯುದ್ದಕ್ಕೂ ರಕ್ತದ ಕಲೆಗಳು ಕಂಡುಬಂದಿದೆ. ಅಲ್ಲೇ ಸಮೀಪದ ಪೊದೆಯಲ್ಲಿ ಈ ಚಿರತೆ ವಾಸ ಮಾಡಿಕೊಂಡಿರಬಹುದು. ಇಂದು ಸಂಜೆಯ ವೇಳೆ ಮತ್ತೆ ಅದು ಆಹಾರ ಅರಸಿ ಹೊರಡುವ ಸಾಧ್ಯತೆ ಅಧಿಕ. ಯಾರು ಭಯಪಡಬೇಕಾದ ಅಗತ್ಯ ಇಲ್ಲ. ಚಿರತೆಯ ಸೆರೆಗಾಗಿ ಆ ಪರಿಸರದಲ್ಲಿ ಬೋನನ್ನು ಇರಿಸಲಾಗಿದೆ’ ಎಂದು ಕಾಪು ಉಪವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ ತಿಳಿಸಿದರು.