ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗಲ್ಲ, ಉದ್ಯಮಿಗಳಿಗೆ ಲಾಭ: ಯು.ಟಿ.ಖಾದರ್
ಮಂಗಳೂರು, ಡಿ.14:ಎಪಿಎಂಸಿ ಕಾಯ್ದೆ ತಿದ್ದುಪಡಿಗಿಂತ ಮೊದಲೇ ರೈತರಿಗೆ ತಮ್ಮ ಉತ್ಪನ್ನಗಳನ್ನು ಯಾವುದೇ ಕಡೆ ಮಾರಾಟ ಮಾಡಲು ಅವಕಾಶ ಇತ್ತು. ಆದರೆ ಉದ್ಯಮಿಗಳಿಗೆ ಎಲ್ಲ ಕಡೆಯಿಂದ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಸರಕಾರದ ಹೊಸ ನೀತಿಯಿಂದ ಉದ್ಯಮಿಗಳಿಗೆ ಲಾಭವಾಗುತ್ತಿದೆ ಹೊರತು ರೈತರಿಗೆ ಲಾಭವಿಲ್ಲ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವನಾಗಿದ್ದ ಸಂದರ್ಭದಲ್ಲಿ ತೊಗರಿ ಬೇಳೆಗೆ ಬೆಲೆ ಏರಿಕೆಯಾದಾಗ ಎಪಿಎಂಸಿ ಮೂಲಕ ನೇರವಾಗಿ ರೈತರಿಂದ ಖರೀದಿಸಿ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಮೂಲಕ ಬೆಲೆ ನಿಯಂತ್ರಣ ಮಾಡಲಾಗಿತ್ತು. ಪರಿಣಾಮವಾಗಿ ಮಾರುಕಟ್ಟೆಯಲ್ಲೂ ತೊಗರಿ ಬೇಳೆ ಗ್ರಾಹಕರಿಗೆ ಕಡಿಮೆ ದರದಲ್ಲಿ ದೊರೆಯಲು ಸಾಧ್ಯವಾಗಿತ್ತು. ಆದರೆ ಹಾಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಉದ್ಯಮಿಗಳಿಗೆ ಆಹಾರ ಧಾನ್ಯ ರೈತರಿಂದ ಸಂಗ್ರಹಿಸಿ ಹೆಚ್ಚಿನ ಲಾಭ ಮಾಡಲು ಅವಕಾಶ ಕಲ್ಪಿಸಿದಂತಾಗಿದೆ. ಈಗಾಗಲೇ ಮಂಗಳೂರು ಎಪಿಎಂಸಿಯಲ್ಲಿ ನಡೆಯುತ್ತಿದ್ದ 12 ಕೋಟಿ ರೂ.ಗಳ ವ್ಯವಹಾರ 2 ಕೋಟಿ ರೂ.ಗೆ ಇಳಿಕೆಯಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ
*ಬಿಜೆಪಿಯ ಜನ ವಿರೋಧಿ ನೀತಿಯಿಂದ ರಾಜ್ಯಾದ್ಯಂತ ಬಿಜೆಪಿ ವಿರೋಧಿ ಅಲೆ ಇದೆ. ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯ ವಿರುದ್ಧ ಜನರು ಆಕ್ರೋಶ ಹೊಂದಿದ್ದಾರೆ. ಇದರಿಂದ ಹಾಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಯು.ಟಿ.ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಸಕ ಹರೀಶ್ ಕುಮಾರ್, ಮಾಜಿ ಶಾಸಕ ಐವನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.