×
Ad

ಮಂಗಳೂರು: ಒಳಚರಂಡಿ ಕಾರ್ಮಿಕರಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ

Update: 2020-12-14 18:56 IST

ಮಂಗಳೂರು, ಡಿ. 14: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿ ಕೆಲಸ ಸ್ಥಗಿತಗೊಳಿಸಿ, ಸೋಮವಾರ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ, ಸಮಿತಿ ಜಿಲ್ಲಾ ಸಂಚಾಲಕ ಜಗದೀಶ್ ಪಾಂಡೇಶ್ವರ, ಹೊರಗುತ್ತಿಗೆಯಿಂದಾಗಿ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಕಾರ್ಮಿಕರ ಗಮನಕ್ಕೆ ತಂದರೂ, ಬೇಡಿಕೆ ಈಡೇರಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಗುತ್ತಿಗೆ ಪದ್ಧತಿಯನ್ನು ಮುಂದುವರಿಸುತ್ತಿದ್ದು, ಪೌರಾಡಳಿತ ನಿರ್ದೇಶನಾಲಯ ಲೋಡರ್ಸ್, ಕ್ಲೀನರ್ಸ್‌ ಮತ್ತು ಯುಜಿಡಿ ಹೆಲ್ಪರ್ಸ್‌ ಸ್ಥಾನಗಳನ್ನು ಭರ್ತಿಮಾಡಲು ವಿಶೇಷ ನೇಮಕಾತಿ ನಿಯಮಾವಳಿ ಪ್ರಕಟಿಸಿದರೂ ಪಾಲಿಕೆ ಕಳುಹಿಸುವಲ್ಲಿ ಹಿಂದೇಟು ಹಾಕಿದೆ ಎಂದವರು ಆರೋಪಿಸಿದರು.

ವರ್ಕರ್ಸ್ ಯೂನಿಯನ್ ಅಧ್ಯಕ್ಷ ನವೀನ್ ಕೊಡಿಯಾಲ್‌ಗುತ್ತು ಮಾತನಾಡಿ, ಯುಜಿಡಿ ವಿಭಾಗದ ಕಾರ್ಮಿಕರ ಗೋಳು ಕೇಳುವವರಿಲ್ಲ ಎನ್ನುವಂತಾಗಿದೆ. ಅಧಿಕಾರಿ ವರ್ಗ ಕಾರ್ಮಿಕರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ಯುಜಿಡಿ ವಿಭಾಗದಲ್ಲಿ 214 ಮಂದಿ ಕಾರ್ಮಿಕರಿದ್ದರೂ, ಕೇವಲ 106 ಮಂದಿಯ ಹೆಸರನ್ನು ಮಾತ್ರ ವಿಶೇಷ ನೇಮಕಾತಿಗೆ ಪ್ರಸ್ತಾವನೆಯಲ್ಲಿ ಕಳುಹಿಸಿದೆ. ಇದರಲ್ಲಿ 57 ಮಂದಿ ತ್ಯಾಜ್ಯ ನಿರ್ವಹಣೆ ಸಂಸ್ಥೆ ಸಿಬ್ಬಂದಿ. ಜತೆಗೆ ಯುಜಿಡಿ ಕಾರ್ಮಿಕರ ವೇತನ, ಪಿಎಫ್, ಇಎಸ್‌ಐ ಎಲ್ಲದರಲ್ಲೂ ಗುತ್ತಿಗೆದಾರರು ವಂಚನೆ ಮಾಡುತ್ತಿದ್ದಾರೆ ಎಂದರು.

ದಸಂಸ ಮಂಗಳೂರು ತಾಲೂಕು ಸಂಚಾಲಕ ಕೆ.ಚಂದ್ರ ಕಡಂದಲೆ, ವರ್ಕರ್ಸ್ ಯೂನಿಯನ್ ಪ್ರಮುಖರಾದ ಪದ್ಮನಾಭ ವಾಮಂಜೂರು, ಸಂತೋಷ್ ಎಡಪದವು, ರಾಜೇಶ್ ಪೆರ್ನಾಜೆ, ರವೀಂದ್ರ ಕಟೀಲ್, ಗಜೇಂದ್ರ, ಹನೀಫ್ ಮೊದಲಾದವರು ಭಾಗವಹಿಸಿದ್ದರು. ಪ್ರತಿಭಟನಾ ಸಭೆ ಬಳಿಕ ಪಾಲಿಕೆ ಪ್ರವೇಶದ್ವಾರದ ಬಳಿ ಸಾಯಂಜಕಾಲ 5.30ರ ವರಗೆ ಧರಣಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News