×
Ad

ದೇವಾಡಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

Update: 2020-12-14 19:25 IST

ಉಡುಪಿ, ಡಿ.14: ದೇವಾಡಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ನಿಯೋಗ ತೆರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಕುರಿತು ರವಿವಾರ ಬಾರಕೂರು ಶ್ರೀಏಕನಾಥೇಶ್ವರಿ ದೇವಸ್ಥಾನದಲ್ಲಿ ನಡೆದ ರಾಜ್ಯದ ವಿವಿಧ ದೇವಾಡಿಗ ಸಂಘಗಳ ಪದಾಧಿಕಾರಿಗಳ ಹಾಗೂ ಸಮುದಾಯದ ಮುಖಂಡರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ದೇವಸ್ಥಾನದ ವಿಶ್ವಸ್ಥರು, ಮುಖ್ಯ ಸಂಚಾಲಕ ಹಿರಿಯಡ್ಕ ಮೋಹನದಾಸ್, ದೇವಾಡಿಗ ಸಮುದಾಯವು ಆರ್ಥಿಕವಾಗಿ ಬಹಳಷ್ಟು ಹಿಂದುಳಿದಿದ್ದು, ಇದರಿಂದ ಸಮುದಾಯದ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ರಾಜಕೀಯವಾಗಿ ಮತ್ತು ಸರಕಾರಿ ಸೇವೆಗಳಲ್ಲಿಯೂ ಸಮುದಾಯದವರ ಸಂಖ್ಯೆ ಬಹಳ ಕಡಿಮೆ. ಈ ನಿಟ್ಟಿನಲ್ಲಿ ದೇವಾಡಿಗ ಅಭಿವೃದ್ಧಿ ನಿಗಮವು ಅಗತ್ಯವಾಗಿ ಸ್ಥಾಪನೆಯಾಗಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

ನಿಗಮ ಸ್ಥಾಪನೆ ಬಗ್ಗೆ ಸಾಗರ ದೇವಾಡಿಗ ಸಂಘ ಈ ಹಿಂದೆಯೇ ನಿರ್ಣಯ ತೆಗೆದುಕೊಂಡಿದೆ. ಈ ಬಗ್ಗೆ ಒಂದೆರಡು ವರ್ಷಗಳ ಹಿಂದೆಯೇ ಪ್ರಯತ್ನ ನಡೆದಿತ್ತಾದರೂ ಯಾವುದೇ ಫಲ ನೀಡಿಲ್ಲ. ಮುಂದೆ ಸಂಘಟನಾತ್ಮಕ ಹಾಗೂ ಸಾಮೂಹಿಕ ನಾಯಕತ್ವದ ಮೂಲಕ ದೇವಾಡಿಗ ಸಮುದಾಯದ ಅಭಿವೃದ್ಧಿಗೆ ಸಂಕಲ್ಪ ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ನಿಗಮದ ರಚನೆಗೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸಲ್ಲಿಸುವ ಕರಡು ಮನವಿಯನ್ನು ತಯಾರಿಸ ಲಾಯಿತು. ಮುಂದಿನ ದಿನಗಳಲ್ಲಿ ನಿಯೋಗ ತೆರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಮತ್ತು ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಸಚಿವರ ಮೂಲಕ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸುವ ಕಾರ್ಯ ಆಯಾಯ ಸಂಘದಿಂದ ಆಗಬೇಕೆಂಬ ನಿರ್ಣಯವನ್ನು ಸಭೆಯಲ್ಲಿ ತೆಗೆದು ಕೊಳ್ಳಲಾಯಿತು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವರಾಜ್ ದೇವಾಡಿಗ ಕಂಕನಾಡಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದಿರುವ ದೇವಾಡಿಗ ಸಮು ದಾಯಕ್ಕೆ ಸರಕಾರದ ಪ್ರೊತ್ಸಾಹ ಸಿಕ್ಕಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಂದಿನ ಸಭೆಯ ಎಲ್ಲಾ ಒಕ್ಕೋರಲ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲಾ ದೇವಾಡಿಗ ಸಂಘದವರು ಸಮುದಾಯದ ಏಳಿಗೆಗೆ ಸಂಘಟನಾತ್ಮಕವಾಗಿ ಹೋರಾಡಬೇಕು ಎಂದರು.

ಸಭೆಯಲ್ಲಿ ಮುಂಬೈ, ಪುಣೆ, ಬೆಂಗಳೂರು, ಕದಂ ಸೇರಿದಂತೆ 65 ವಿವಿಧ ದೇವಾಡಿಗ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಬಾರಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ಪ್ರಧಾನ ಕಾರ್ಯ ದರ್ಶಿ ನರಸಿಂಹ ದೇವಾಡಿಗ, ವ್ಯವಸ್ಥಾಪನ ಸಮಿತಿ ಗೌರವ ಕಾರ್ಯದರ್ಶಿ ಗಣೇಶ್ ದೇವಾಡಿಗ, ವಿಶ್ವಸ್ಥರಾದ ಆಲೂರು ರಘುರಾಮ ದೇವಾಡಿಗ, ಬಿ. ಜನಾರ್ದನ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News