ಕೆಎಸ್ಸಾರ್ಟಿಸಿ ನೌಕರರ ಮುಷ್ಕರ ವಾಪಸ್: ದ.ಕ. ಜಿಲ್ಲೆಯಲ್ಲಿ ಬಸ್ ಸಂಚಾರ ಪುನಾರಂಭ
ಮಂಗಳೂರು, ಡಿ.14: ಕೆಎಸ್ಸಾರ್ಟಿಸಿ ಸಾರಿಗೆ ನೌಕರರ ಮುಷ್ಕರ ವಾಪಸ್ ಪಡೆದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದಲೇ ಶೇ.50ರಷ್ಟು ಕೆಎಸ್ಸಾರ್ಟಿಸಿ ಬಸ್‌ಗಳು ಪುನಃ ಸಂಚಾರ ಆರಂಭಿಸಿವೆ.
ಮಂಗಳೂರು ಮತ್ತು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಸೋಮವಾರ ಮಧ್ಯಾಹ್ನ ವೇಳೆಗೆ ಆಯಾ ವಿಭಾಗೀಯ ನಿಯಂತ್ರಣಾಧಿಕಾರಿಗಳ ಮುತುವರ್ಜಿಯಿಂದ ಶೇ.10ರಷ್ಟು ಬಸ್‌ಗಳು ಸಂಚಾರಕ್ಕೆ ಇಳಿದಿದ್ದವು. ಸಂಜೆ ಮುಷ್ಕರ ವಾಪಸ್ ಆಗುತ್ತಿದ್ದಂತೆ ಶೇ.50ರಷ್ಟು ಬಸ್‌ಗಳು ಸಂಚಾರ ಆರಂಭಿಸಿದವು. ಈ ವೇಳೆ ಖಾಸಗಿ ಬಸ್‌ಗಳು ಕೂಡ ಹೆಚ್ಚುವರಿ ಸಂಚಾರ ನಡೆಸಿರುವುದು ಗಮನಾರ್ಹ.
ಕೆಎಸ್ಸಾರ್ಟಿಸಿ ನೌಕರರ ಮುಷ್ಕರದ ಹೊರತಾಗಿಯೂ ಮಂಗಳೂರು ವಿಭಾಗದಿಂದ ಧರ್ಮಸ್ಥಳ, ಸುಬ್ರಹ್ಮಣ್ಯ, ಕಾಸರಗೋಡುಗಳಿಗೆ ಕೆಲವೇ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ಸೋಮವಾರ ಬೆಳಗ್ಗೆ ಏಕಾಏಕಿ ನೌಕರರು ಮುಷ್ಕರಕ್ಕೆ ಇಳಿದ ಪರಿಣಾಮ ಮಂಗಳೂರು ವಿಭಾಗದಲ್ಲೂ ಬಸ್ ಸಂಚಾರ ಸ್ಥಗಿತಗೊಂಡಿತು.
ಬಳಿಕ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಕುಮಾರ್ ನೌಕರರ ಜೊತೆ ಮಾತುಕತೆ ನಡೆಸಿ ಬೆಳಗ್ಗೆ 11 ಗಂಟೆ ಸುಮಾರಿಗೆ 38ಕ್ಕೂ ಹೆಚ್ಚು ಬಸ್‌ಗಳು ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಕಾಸರಗೋಡುಗಳಿಗೆ ಸಂಚರಿಸಲು ಅನುವಾಗಿದ್ದವು. ಪುತ್ತೂರು ವಿಭಾಗದಿಂದಲೂ ಧರ್ಮಸ್ಥಳ, ಪುತ್ತೂರು, ಬಿ.ಸಿ.ರೋಡ್ ಹಾಗೂ ಮಡಿಕೇರಿಗೆ ಬೆರಳೆಣಿಕೆ ಬಸ್‌ಗಳು ಸಂಚರಿಸಿದವು. ಆದರೆ ಸುಳ್ಯದಲ್ಲಿ ಬಸ್ ರಸ್ತೆಗೆ ಇಳಿಯಲೇ ಇಲ್ಲ.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪ ಉತ್ಸವ ಪ್ರಯುಕ್ತ ಪುತ್ತೂರು ವಿಭಾಗದಿಂದ ಪುತ್ತೂರು, ಸುಬ್ರಹ್ಮಣ್ಯದಿಂದ ಕೆಎಸ್ಸಾರ್ಟಿಸಿ ಕಳೆದ ಮೂರು ದಿನಗಳಿಂದ ಬಸ್ ಓಡಿಸುತ್ತಿದೆ. ಈ ಬಗ್ಗೆ ಪುತ್ತೂರು ವಿಭಾಗದ ವಿಭಾಗೀಯ ಅಧಿಕಾರಿ ಹಾಗೂ ಸಂಚಾರ ನಿಯಂತ್ರಣಾಧಿಕಾರಿಗಳು ನೌಕರರ ಮನ ಒಲಿಸಿ ಧರ್ಮಸ್ಥಳಕ್ಕೆ ಬಸ್ ಸಂಚಾರ ಏರ್ಪಡಿಸಿದರು.
ಸಂಚಾರ ನಿಯಂತ್ರಣಾಧಿಕಾರಿಗಳು ಧರ್ಮಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಧರ್ಮಸ್ಥಳಕ್ಕೆ ರವಿವಾರ ತೆರಳಿದ್ದ ಕೆಎಸ್ಸಾರ್ಟಿಸಿ ಬಸ್ ಚಾಲಕರು ಮುಷ್ಕರಕ್ಕೆ ಮುಂದಾಗಿದ್ದರು. ಆಗ ಸ್ವತಃ ಕಾರ್ಯಾಚರಣೆಗೆ ಇಳಿದ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಬಸ್‌ಗಳನ್ನು ವಾಪಸ್ ಮಂಗಳೂರಿಗೆ ಕರೆಸಿ, ಮಂಗಳೂರಿನಿಂದ ಸೋಮವಾರ ವಿವಿಧ ಕಡೆಗಳಿಗೆ ಸಂಚಾರ ಏರ್ಪಾಟು ಮಾಡಿಸಿದರು.
ಮಂಗಳೂರಿನ ಮೂರು ಡಿಪೋ, ಉಡುಪಿ ಹಾಗೂ ಕುಂದಾಪುರ ಸೇರಿ ಕೋವಿಡ್ ನಂತರ 390 ಬಸ್‌ಗಳ ಪೈಕಿ 200ಕ್ಕೂ ಅಧಿಕ ಬಸ್‌ಗಳು ಸೋಮವಾರ ಸಂಜೆಯಿಂದಲೇ ರಸ್ತೆಗೆ ಇಳಿದಿವೆ. ಕಾಸರಗೋಡಿಗೂ ಸಂಚಾರ ಕೈಗೊಂಡಿವೆ. ಇದೇ ರೀತಿ ಪುತ್ತೂರು, ಬಿ.ಸಿ.ರೋಡ್, ಧರ್ಮಸ್ಥಳ, ಸುಳ್ಯ, ಮಡಿಕೇರಿ ಡಿಪೋ ವ್ಯಾಪ್ತಿಯ ಪುತ್ತೂರು ವಿಭಾಗದಲ್ಲಿ 390 ಬಸ್‌ಗಳ ಪೈಕಿ 200ಕ್ಕೂ ಅಧಿಕ ಬಸ್‌ಗಳು ರಸ್ತೆಗೆ ಇಳಿದಿವೆ. ಸೋಮವಾರ ರಾತ್ರಿ ಕೂಡ ಈ ಎರಡು ವಿಭಾಗಗಳಿಂದ ಬಸ್‌ಗಳು ಎಂದಿನ ಸಂಚಾರ ಕೈಗೊಂಡಿವೆ.
ಕಳೆದ ನಾಲ್ಕು ದಿನಗಳಿಂದ ಕೆಎಸ್ಸಾರ್ಟಿಸಿ ಬಸ್‌ಗಳು ರಸ್ತೆಗೆ ಇಳಿಯದೆ ಮುಷ್ಕರ ನಡೆಸುತ್ತಿದ್ದರೆ, ಇತ್ತ ಖಾಸಗಿ ಬಸ್ ಮಾಲಕರು ದರ ಏರಿಕೆ ಮಾಡದೆ ಖಾಸಗಿ ಬಸ್‌ಗಳನ್ನು ಓಡಿಸಿ ಪ್ರಯಾಣಿಕರಿಗೆ ನೆರವಾಗಿರುವುದು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
ಮಂಗಳೂರು ನಗರ ಹಾಗೂ ಗ್ರಾಮಾಂತರ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ರೂಟ್‌ಗಳಲ್ಲಿ ಖಾಸಗಿ ಬಸ್ ಸಂಚಾರ ಸ್ಥಗಿತವಾಗಿರಲಿಲ್ಲ. ರವಿವಾರ ಸಂಜೆ ಖಾಸಗಿ ಬಸ್‌ಗಳ ರಾಜ್ಯ ಮಟ್ಟದ ಸಂಘಟನೆಗಳು ಸರಕಾರಿ ಬಸ್ ಮುಷ್ಕರಕ್ಕೆ ಕೈಜೋಡಿಸುವ ಮಾತನ್ನಾಡಿದರೂ ದ.ಕ. ಜಿಲ್ಲೆಯ ಬಸ್ ಮಾಲಕರು ಬಸ್ ಬಂದ್ ಬೆಂಬಲಿಸುವುದಿಲ್ಲ ಎಂದು ದಿಟ್ಟತನ ತೋರಿಸಿದ್ದರು.
‘ಮಂಗಳೂರು ಸಂಪರ್ಕಿಸುವ ಧರ್ಮಸ್ಥಳ, ಸುಬ್ರಹ್ಮಣ್ಯ, ಕಾಸರಗೋಡು, ಪುತ್ತೂರು ರೂಟ್‌ಗಳಲ್ಲಿ ಎಂದಿನಂತೆ ಖಾಸಗಿ ಬಸ್‌ಗಳನ್ನು ಓಡಿಸಿದ್ದಾರೆ. ಜತೆಗೆ ಹೆಚ್ಚುವರಿ ಟ್ರಿಪ್‌ಗಳನ್ನು ನಡೆಸಿದ್ದಾರೆ’ ಎಂದು ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಸ್ಪಷ್ಟಪಡಿಸಿದ್ದಾರೆ.