ಕೋಡಿ ಗ್ರಾಪಂನಲ್ಲಿ ಚುನಾವಣಾ ಬಹಿಷ್ಕಾರ

Update: 2020-12-14 15:27 GMT

ಕೋಟ, ಡಿ.1: ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಕೋಡಿ ಗ್ರಾಪಂನಲ್ಲಿ ಸಲ್ಲಿಕೆಯಾಗಿದ್ದ ಮೂರು ನಾಮಪತ್ರಗಳನ್ನು ಅಭ್ಯರ್ಥಿಗಳು ಗ್ರಾಮಸ್ಥರಿಗೆ ಬೆಂಬಲವಾಗಿ ವಾಪಾಸ್ಸು ಪಡೆದುಕೊಂಡಿದ್ದಾರೆ. ಇದರಿಂದ ಇಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ ಶೂನ್ಯವಾಗಿದೆ.

ಗ್ರಾಮದ ಹಕ್ಕುಪತ್ರ ಸಮಸ್ಯೆ, ಜೆಟ್ಟಿ ಸಮಸ್ಯೆ, ಅಭಿವೃದ್ಧಿಯ ವಿಚಾರದಲ್ಲಿ ಜನಪ್ರತಿನಿಧಿಗಳ ಅಸಹಕಾರ ವಿರುದ್ಧ ಕೋಡಿಕನ್ಯಾಣ, ಕೋಡಿತಲೆ, ಕೋಡಿ ಹೊಸಬೆಂಗ್ರೆ, ಕೋಡಿಬೆಂಗ್ರೆ ಗ್ರಾಮದ ಗ್ರಾಮಸ್ಥರು ಇಡೀ ಕೋಡಿ ಗ್ರಾಪಂ ವ್ಯಾಪ್ತಿಯಲ್ಲಿ ಚುನಾಣೆ ಬಹಿಷ್ಕಾರಿಸುವುದಾಗಿ ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ ಸೇರಿದಂತೆ ವಿವಿಧ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಸಭೆ ನಡೆಸಿ, ಗ್ರಾಮಸ್ಥರಲ್ಲಿ ಚುನಾವಣೆ ಬಹಿಷ್ಕಾರ ನಿರ್ಧಾರ ಕೈಬಿಡುವಂತೆ ಮನವಿ ಮಾಡಿದ್ದರು. ಆದರೆ ಗ್ರಾಮಸ್ಥರು ತಮ್ಮ ಪಟ್ಟು ಕೈಬಿಡದೆ ಚುನಾವಣಾ ಬಹಿಷ್ಕಾರವನ್ನು ಮುಂದುವರೆಸಿದ್ದಾರೆ.

ಈ ಮಧ್ಯೆ ಕೋಡಿಬೆಂಗ್ರೆ ವಾರ್ಡ್‌ನ ಸಾಮಾನ್ಯ ಕ್ಷೇತ್ರದಿಂದ ಎರಡು ಹಾಗೂ ಹಿಂದುಳಿದ ವರ್ಗದಿಂದ ಒಂದು ಸೇರಿದಂತೆ ಒಟ್ಟು ಮೂರು ನಾಮಪತ್ರಗಳು ಸಲ್ಲಿಕೆಯಾಗಿತ್ತು. ಈ ನಾಮಪತ್ರಗಳನ್ನು ಸಲ್ಲಿಸಿದವರ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ನಾಮಪತ್ರ ಹಿಂದಕ್ಕೆ ಪಡೆಯುವ ಕೊನೆಯ ದಿನವಾದ ಸೋಮವಾರ ಅಭ್ಯರ್ಥಿಗಳಾದ ವಿನಯ್ ಅಮೀನ್, ಪ್ರಸಾದ್, ನಿಶಾ ತಮ್ಮ ನಾಮಪತ್ರವನ್ನು ವಾಪಸು ಪಡೆಯುವ ಮೂಲಕ ಕಣದಿಂದ ಹಿಂದೆಸರಿದಿದ್ದಾರೆ. ಇದರಿಂದ ಈ ಗ್ರಾಪಂನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳು ಕಣದಲ್ಲಿ ಇಲ್ಲವಾಗಿದೆ. ಆದುದರಿಂದ ಇಲ್ಲಿ ಈ ಬಾರಿ ಚುನಾವಣೆ ನಡೆಯುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಡಿ ಗ್ರಾಮ ಪಂಚಾಯತ್‌ನ 12 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದ ನಾಲ್ಕು ಸ್ಥಾನಗಳಲ್ಲಿ ಮೂರು ನಾಮಪತ್ರ ಸಲ್ಲಿಕೆಯಾಗಿದ್ದವು. ಕೊನೆಯ ದಿನವಾದ ಇಂದು ಆ ಮೂರು ನಾಮಪತ್ರವನ್ನು ವಾಪಾಸ್ಸು ಪಡೆದುಕೊಳ್ಳಲಾಗಿದೆ. ಆದು ದರಿಂದ ಈ ಗ್ರಾಪಂನಲ್ಲಿ ಯಾವುದೇ ಅಭ್ಯರ್ಥಿ ಕಣದಲ್ಲಿ ಇಲ್ಲದೆ ಇರುವುದ ರಿಂದ ಚುನಾವಣೆಯ ನಡೆಯಲ್ಲ. ಆಡಳಿತಾಧಿಕಾರಿಯೇ ಮುಂದುವರೆಯಲಿದ್ದಾರೆ.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಚುನಾವಣಾಧಿಕಾರಿ, ಉಡುಪಿ ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News