ಆ್ಯಪಲ್‌ನಿಂದ ಕೋಲಾರದ ಐಫೋನ್ ಘಟಕದ ತನಿಖೆ

Update: 2020-12-14 16:42 GMT

ಕೋಲಾರ/ಹೊಸದಿಲ್ಲಿ, ಡಿ. 14: ಹಿಂಸಾಚಾರ ಸ್ಫೋಟಿಸಿದ ಕೋಲಾರದ ನರಸಾಪುರದಲ್ಲಿರುವ ಐಫೋನ್ ಉತ್ಪಾದನಾ ಘಟಕದಲ್ಲಿ ತನ್ನ ತೈವಾನಿನ ಗುತ್ತಿಗೆದಾರ ವಿಸ್ಟ್ರಾನ್ ಕಾರ್ಪ್ ಪೂರೈಕೆದಾರರ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆ್ಯಪಲ್ ಇಂಕ್ ಸೋಮವಾರ ಹೇಳಿದೆ.

ಆ್ಯಪಲ್‌ನ ಜಾಗತಿಕ ಮಟ್ಟದ ಉನ್ನತ ಪೂರೈಕೆದಾರರಲ್ಲಿ ವಿಸ್ಟ್ರಾನ್ ಕೂಡ ಒಂದು. ಇದು ಭಾರತದಲ್ಲಿ ಐಫೋನ್ 7 ಹಾಗೂ ಎರಡನೇ ತಲೆಮಾರಿನ ಐಫೋನ್ ಸೆ ಮೊಬೈಲ್‌ಗಳನ್ನು ಉತ್ಪಾದಿಸುತ್ತಿದೆ. ಈ ಕಾರ್ಖಾನೆಯಲ್ಲಿ 10 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ.

‘‘ನಮ್ಮ ಪೂರೈಕೆ ಸರಪಳಿಯಲ್ಲಿ ಪ್ರತಿಯೊಬ್ಬರನ್ನು ಗೌರವದಿಂದ ನೋಡಿಕೊಳ್ಳಲು ಆ್ಯಪಲ್ ಬದ್ದವಾಗಿದೆ. ಭಾರತದ ನರಸಾಪುರದಲ್ಲಿರುವ ವಿಸ್ಟ್ರಾನ್‌ನ ಘಟಕದ ಬಗ್ಗೆ ವಿಸ್ತೃತ ತನಿಖೆ ಆರಂಭಿಸಿದ್ದೇವೆ’’ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

‘‘ನಾವು ಈ ಘಟಕಕ್ಕೆ ಹೆಚ್ಚುವರಿ ಆ್ಯಪಲ್ ತಂಡವನ್ನು ಹಾಗೂ ಲೆಕ್ಕಾಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದೇವೆ. ನಮ್ಮ ತಂಡ ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ. ಅವರ ತನಿಖೆಗೆ ನಾವು ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ’’ ಎಂದು ಅದು ತಿಳಿಸಿವೆ.

ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್ ಕಾರ್ಖಾನೆಯಲ್ಲಿ ಶನಿವಾರ ಹಿಂಸಾಚಾರ ಉದ್ಭವಿಸಿತ್ತು. ವೇತನದ ಬಗ್ಗೆ ಆಕ್ರೋಶಿತರಾದ ಕೆಲವು ಉದ್ಯೋಗಿಗಳು ಕಾರ್ಖಾನೆಯ ಆವರಣದಲ್ಲಿ ದಾಂಧಲೆ ನಡೆಸಿದ್ದರು.

ಬೆಂಗಳೂರಿನ 50 ಕಿ.ಮೀ. ಪೂರ್ವದ ಕೋಲಾರ ಜಿಲ್ಲೆಯಲ್ಲಿರುವ ಘಟಕದಲ್ಲಿ 412.5 ಕೋಟಿ ರೂಪಾಯಿ ಸೊತ್ತಿಗೆ ಹಾನಿ ಉಂಟಾಗಿದೆ. ಮೊಬೈಲ್ ಫೋನ್, ಯಂತ್ರ ಹಾಗೂ ಇತರ ಸಲಕರಣಿಗಳು ಹಾನಿಗೀಡಾಗಿವೆ. 10 ಕೋಟಿ ರೂಪಾಯಿಯ ಮೂಲಭೂತ ಸೌಕರ್ಯ, 60 ಲಕ್ಷ ರೂಪಾಯಿಯ ಗಾಲ್ಫ್ ಕಾರ್ಟ್ಸ್ ಹಾಗೂ 1.5 ಕೋಟಿ ರೂಪಾಯಿಯ ಸ್ಮಾರ್ಟ್‌ಫೋನ್ ಹಾಗೂ ಇತರ ಸಾಧನಗಳು ಹಾನಿಯಾಗಿರುವುದು, ಕಳವುಗೈದಿರುವುದು, ಕಾಣೆಯಾಗಿರುವುದು ಕೂಡ ಇದರಲ್ಲಿ ಒಳಗೊಂಡಿದೆ ಎಂದು ವಿಸ್ಟ್ರಾನ್ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಹೇಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 100 ಮಂದಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News