×
Ad

ಅಮೆರಿಕ ನ್ಯಾಯಾಲಯದಿಂದ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ರಾಣಾಗೆ ಜಾಮೀನು ನಿರಾಕರಣೆ

Update: 2020-12-14 22:21 IST

ವಾಶಿಂಗ್ಟನ್, ಡಿ. 14: 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ, ಪಾಕಿಸ್ತಾನ ಮೂಲದ ಕೆನಡ ಉದ್ಯಮಿ ತಹವ್ವರ್ ರಾಣಾನ ಜಾಮೀನು ಅರ್ಜಿಯನ್ನು ಅಮೆರಿಕದ ನ್ಯಾಯಾಲಯವೊಂದು ತಿರಸ್ಕರಿಸಿದೆ. ವಿಮಾನದ ಮೂಲಕ ತಪ್ಪಿಸಿಕೊಂಡು ಹೋಗುವ ಸಾಧ್ಯತೆಯನ್ನು ಅವನು ನಿವಾರಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಭಯೋತ್ಪಾದಕ ದಾಳಿಯ ಆರೋಪಿ ರಾಣಾ ದೇಶಭ್ರಷ್ಟ ಎಂಬುದಾಗಿ ಭಾರತ ಘೋಷಿಸಿದೆ ಹಾಗೂ ಅವನನ್ನು ಗಡಿಪಾರು ಮಾಡುವಂತೆ ಅಮೆರಿಕಕ್ಕೆ ಮನವಿ ಮಾಡಿದೆ. ಈ ಮನವಿಯ ಹಿನ್ನೆಲೆಯಲ್ಲಿ ಆತನನ್ನು ಲಾಸ್ ಏಂಜಲಿಸ್‌ನಲ್ಲಿ ಜೂನ್ 10ರಂದು ಮರುಬಂಧಿಸಲಾಗಿತ್ತು.

ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಆರು ಅಮೆರಿಕನ್ನರು ಸೇರಿದಂತೆ 166 ಮಂದಿ ಮೃತಪಟ್ಟಿದ್ದಾರೆ.

ರಾಣಾನು ಮುಂಬೈ ದಾಳಿಯ ಸೂತ್ರಧಾರ ಹಾಗೂ ಲಷ್ಕರೆ ತಯ್ಯಬ ಭಯೋತ್ಪಾದಕನಾಗಿರುವ ಪಾಕಿಸ್ತಾನಿ-ಅಮೆರಿಕನ್ ಡೇವಿಡ್ ಕೋಲ್‌ಮನ್ ಹೆಡ್ಲಿಯ ಬಾಲ್ಯದ ಗೆಳೆಯನಾಗಿದ್ದಾನೆ. ದಾಳಿಗೆ ಸಂಬಂಧಿಸಿ ಹೆಡ್ಲಿ ಈಗ ಅಮೆರಿಕದಲ್ಲಿ 35 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

ವಿಮಾನದ ಮೂಲಕ ತಪ್ಪಿಸಿಕೊಳ್ಳದಿರಲು ಹಲವು ಶರತ್ತುಗಳನ್ನು ವಿಧಿಸಬಹುದೆಂದು ರಾಣಾ ಸೂಚಿಸಿರುವನಾದರೂ, ಅವು ಯಾವುದೂ ಆ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ ಎಂದು ಲಾಸ್ ಏಂಜಲಿಸ್‌ನ ಜಿಲ್ಲಾ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶೆ ಜಾಕಲಿನ್ ಚೂಲಿಜಾನ್ ಡಿಸೆಂಬರ್ 10ರಂದು ನೀಡಿದ ತೀರ್ಪಿನಲ್ಲಿ ಹೇಳಿದ್ದಾರೆ ಹಾಗೂ ಜಾಮೀನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News