×
Ad

ಎಲಿಮಲೆಯಲ್ಲಿ 8ರ ಹರೆಯದ ಬಾಲಕಿಯ ಅತ್ಯಾಚಾರ: ಆರೋಪಿ ಖಾಸಗಿ ಶಾಲೆಯ ಆಡಳಿತಾಧಿಕಾರಿಯ ಬಂಧನ

Update: 2020-12-14 22:29 IST
ಅನಿಲ್ ಅಂಬೆಕಲ್ಲು

ಸುಳ್ಯ, ಡಿ.14: ಸೈಕಲ್ ಕೊಡಿಸುವುದಾಗಿ ನಂಬಿಸಿ ಎಂಟು ವರ್ಷದ ಬಾಲಕಿಯೊಬ್ಬಳನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದಲ್ಲಿ ದೇವಚಳ್ಳ ಗ್ರಾಮದ ಎಲಿಮಲೆಯ ಖಾಸಗಿ ಶಾಲೆಯೊಂದರ ಆಡಳಿತಾಧಿಕಾರಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಅನಿಲ್ ಅಂಬೆಕಲ್ಲು ಬಂಧಿತ ಆರೋಪಿ. ಈತನ ವಿರುದ್ಧ ಸುಬ್ರಹ್ಮಣ್ಯ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಡಿ.10ರ ಸಂಜೆ ಎಲಿಮಲೆಯ ಖಾಸಗಿ ಶಾಲೆಯ ಅಂಗಳದಲ್ಲಿ ಸೈಕಲ್ ಕಲಿಯುತ್ತಿದ್ದ ಎಂಟು ವರ್ಷದ ಬಾಲಕಿಗೆ ಹೊಸ ಸೈಕಲ್ ಕೊಡಿಸುತ್ತೇನೆ ಎಂದು ಶಾಲೆಯಲ್ಲಿರುವ ತನ್ನ ಕಚೇರಿಗೆ ಕರೆದೊಯ್ದು ಆರೋಪಿ ಅನಿಲ್ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಕೃತ್ಯ ಮನೆಮಂದಿಯ ಗಮನಕ್ಕೆ ಬರುತ್ತಲೇ ಮನೆಯವರು ಶಾಲಾಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ ಹಾಗೂ ಆರೋಪಿಯನ್ನು ಶಾಲೆಯ ಜವಬ್ದಾರಿಯುತ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದೆ. ಒತ್ತಡಕ್ಕೆ ಮಣಿದ ಶಾಲಾಡಳಿತ ಮಂಡಳಿಯು ಕೂಡಲೇ ಆರೋಪಿಯನ್ನು ಆಡಳಿತಾಧಿಕಾರಿ ಸ್ಥಾನದಿಂದ ವಜಾಗೊಳಿಸಿದೆಯೆನ್ನಲಾಗಿದೆ.

ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ವಿಚಾರ ಬಹಿರಂಗಗೊಂಡಿದ್ದು, ಆರೋಪಿ ಅನಿಲ್ ಅಂಬೆಕಲ್ಲು ವಿರುದ್ಧ ಕೇಸು ದಾಖಲಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಈ ಬಗ್ಗೆ ಮಾಹಿತಿ ತಿಳಿದ ಸುಳ್ಯ ಬಿಇಒ ಕಚೇರಿಯಿಂದ ಚೈಲ್ಡ್‌ಲೈನ್ ಸಂಸ್ಥೆಗೆ ತನಿಖೆ ನಡೆಸುವಂತೆ ಸೂಚಿಸಲಾಗಿತ್ತೆನ್ನಲಾಗಿದೆ. ಚೈಲ್ಡ್‌ಲೈನ್‌ನವರು ಸಂತ್ರಸ್ತ ಬಾಲಕಿಯ ಮನೆಗೆ ಬಂದು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಚೈಲ್ಡ್‌ಲೈನ್ ಸೂಚನೆಯಂತೆ ಬಾಲಕಿಯ ತಾಯಿ ಬಳಿ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.

ಈ ಘಟನೆಯ ಬಗ್ಗೆ ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನಂತೆ ಆರೋಪಿಯಾಗಿರುವ ದೇವಚಳ್ಳ ಗ್ರಾಮದ ಅನಿಲ್ ಅಂಬೆಕಲ್ಲು ಎಂಬಾತನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News