‘ಲವ್ ಜಿಹಾದ್’ ಪ್ರಕರಣದಲ್ಲಿ ಪುತ್ರರ ಬಂಧನ; ನೆರೆಹೊರೆಯವರ ಸಹಾಯದಿಂದ ದಿನದೂಡುತ್ತಿರುವ ತಂದೆತಾಯಿ
ಮೊರಾದಾಬಾದ್,ಡಿ.15: ಉತ್ತರ ಪ್ರದೇಶದ ಮೊರಾದಾಬಾದ್‍ನ ಕಾಂತ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಕುಟುಂಬವೊಂದು ರಾಜ್ಯದಲ್ಲಿನ ಮತಾಂತರ ನಿಷೇಧ ಕಾಯ್ದೆಯ ಕಾರಣದಿಂದ ಸಂಕಷ್ಟಕ್ಕೊಳಗಾಗಿದೆ. ಈ ಮನೆಯ ಇಬ್ಬರು ಆಧಾರಸ್ಥಂಭಗಳು ಇದೀಗ ಜೈಲುಪಾಲಾಗಿರುವುದರಿಂದ ಅವರ 45 ವರ್ಷದ ತಾಯಿಗೆ ಮತ್ತು ವೃದ್ಧ ತಂದೆಗೆ ದಿಕ್ಕೇ ತೋಚದಂತಾಗಿದ್ದು, ನೆರೆಹೊರೆಯವರ ಸಹಾಯದಿಂದ ಈ ಕುಟುಂಬ ದಿನದೂಡುತ್ತಿದೆ.
“ಅವರು ಯಾವುದೇ ಅಪರಾಧವೆಸಗಿಲ್ಲ” ಎಂದು ಇಬ್ಬರು ಯುವಕರ ತಾಯಿ ಹೇಳುತ್ತಾರೆ. ಆಕೆಯ ಹಿರಿಯ ಪುತ್ರ ದಿನಗೂಲಿ ಕಾರ್ಮಿಕನಾಗಿದ್ದರೆ ಕಿರಿಯವ ಕ್ಷೌರಿಕನಾಗಿದ್ದಾನೆ. “ನನಗೆ ನಾಲ್ಕು ಮಂದಿ ಪುತ್ರಿಯರು ಹಾಗೂ ಮೂವರು ಪುತ್ರರು. ಇಬ್ಬರು ಪುತ್ರರು ಜೈಲಿನಲ್ಲಿದ್ದಾರೆ. ನಾವು ಕಡು ಬಡವರು, ಮನೆಯಲ್ಲಿ ತಿನ್ನಲು ಏನೂ ಇಲ್ಲ” ಎಂದು ಆಕೆ ತಮ್ಮ ಕಷ್ಟ ವಿವರಿಸುತ್ತಾರೆ.
ಕುಟುಂಬಕ್ಕೆ ವಿದ್ಯುತ್ ಬಿಲ್ ಕೂಡ ಪಾವತಿಸಲು ಕಷ್ಟವಾಗಿದ್ದರಿಂದ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಜೈಲಿನಲ್ಲಿರುವ ಪುತ್ರರನ್ನು ಬಿಡಿಸಲು ವಕೀಲರನ್ನು ಹೇಗೆ ನೇಮಿಸುವುದು ಎಂದು ಕೂಡ ಆಕೆಗೆ ತಿಳಿಯದಾಗಿದ್ದು ಅದಕ್ಕೆ ಅವಶ್ಯಕತೆಯಿರುವ ಹಣವೂ ಆಕೆಯ ಬಳಿಯಿಲ್ಲ. ಒಂದು ವಾರದ ಹಿಂದೆ ಸರಕಾರದ ಆಶ್ರಯತಾಣಕ್ಕೆ ಕರೆದುಕೊಂಡು ಹೋಗಲಾದ ಸೊಸೆಯ ಬಗ್ಗೆಯೂ ಈಕೆಗೆ ಕಳವಳವಿದೆ. ಆಕೆ ಗರ್ಭಿಣಿಯಾಗಿರುವುದರಿಂದ ಹಾಗೂ ತೀವ್ರ ರಕ್ತಸ್ರಾವದಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂದಿತ್ತು.
“ಆಕೆ ನನ್ನನ್ನು ಪಾಪಾಜಿ ಎನ್ನುತ್ತಾಳೆ. ನನ್ನ ಮೇಲೆ ಅಪಾರ ಪ್ರೀತಿ ಮತ್ತು ಗೌರವ. ಆಕೆ ನನ್ನ ಪುತ್ರಿ ಆಕೆ ನಮಗೆ ವಾಪಸ್ ಬೇಕು” ಎಂದು ಯುವಕರ 54 ವರ್ಷದ ತಂದೆ ತಮ್ಮ ಸೊಸೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಬಂಧಿತ ಯುವಕರ ಸಹೋದರಿ ತಮ್ಮ ಕುಟುಂಬದ ಫೋಟೋ ತೋರಿಸಿ “ಧರ್ಮ ಒಂದು ವಿಚಾರವೇ ಅಲ್ಲ. ನಮ್ಮ ಜೀವನದಲ್ಲಿ ಜನರೇಕೆ ಹಸ್ತಕ್ಷೇಪ ಮಾಡುತ್ತಾರೆಂದು ಆಕೆ ಯಾವತ್ತೂ ಪ್ರಶ್ನಿಸುತ್ತಿದ್ದಳು” ಎನ್ನುತ್ತಾಳೆ.
ನಿಕಾಹ್ ನಡೆದ ನಂತರ ನಾಲ್ಕು ತಿಂಗಳುಗಳಿಂದ ಅಂತರ-ಧರ್ಮೀಯ ದಂಪತಿ ಇದೇ ಮನೆಯಲ್ಲಿ ವಾಸವಾಗಿದ್ದರು. ಯುವತಿ ತನ್ನ ಸ್ವಇಚ್ಛೆಯಿಂದಲೇ ಮತಾಂತರಗೊಂಡಿದ್ದಳು ಎಂದು ಆಕೆಯ ಅತ್ತೆ ಹೇಳುತ್ತಾರೆ. ಇಬ್ಬರೂ ತಮ್ಮ ವಿವಾಹ ನೋಂದಣಿಗಾಗಿ ಡಿಸೆಂಬರ್ 5ರಂದು ರಿಜಿಸ್ಟ್ರಾರ್ ಕಚೇರಿಗೆ ತೆರಳುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು ತಡೆದಿದ್ದರು. ನಂತರ ಯುವಕನನ್ನು ಬಂಧಿಸಲಾಗಿತ್ತು.
“ಆಕೆ ಯಾವತ್ತೂ ಪತಿಯ ಜತೆ ಖುಷಿಯಿಂದಿದ್ದಳು, ತನ್ನ ನಾದಿನಿ ಜತೆಗೂ ಸ್ನೇಹದಿಂದಿದ್ದಳು” ಎಂದು ನೆರೆಮನೆಯವರೊಬ್ಬರು ಹೇಳುತ್ತಾರೆ. ಉತ್ತರಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾದ ಬಳಿಕ ನಡೆದ ಹಲವು ಪ್ರಕರಣಗಳಲ್ಲಿ ಇದೂ ಒಂದು.