ನಟ ದಿಲೀಪ್ ಪ್ರಕರಣ: ಮಹಿಳಾ ಜಡ್ಜ್ ಅನ್ನು ಬದಲಾಯಿಸಲಾಗುವುದಿಲ್ಲವೆಂದ ಸುಪ್ರೀಮ್ ಕೋರ್ಟ್
ಹೊಸದಿಲ್ಲಿ,ಡಿ.15: ಮಲಯಾಳಂ ಚಿತ್ರರಂಗದ ನಟಿಯೋರ್ವರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿನ ಮಹಿಳಾ ನ್ಯಾಯಾಧೀಶೆಯನ್ನು ಬದಲಾಯಿಸಬೇಕೆಂಬ ಕೇರಳ ಸರಕಾರದ ಮನವಿಯನ್ನು ಸುಪ್ರೀಮ್ ಕೋರ್ಟ್ ಇಂದು ತಳ್ಳಿ ಹಾಕಿದೆ.
ದಿಲೀಪ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ವಿಚಾರಣೆ ಮಾಡುತ್ತಿರುವ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶೆಯು ಪಕ್ಷಪಾತ ನಡೆಸುತ್ತಿದ್ದಾರೆಂದು ಕೇರಳ ಸರಕಾರವು ಆರೋಪಿಸಿತ್ತು. ಸಾಕ್ಷಿಗಳನ್ನು ವಿಚಾರಣೆ ನಡೆಸುವ ಪಾಟಿ ಸವಾಲಿನ ಸಂದರ್ಭದಲ್ಲಿನ ಕೆಲವು ಲೋಪದೋಷಗಳನ್ನೂ ಸರಕಾರ ಬೆಟ್ಟು ಮಾಡಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಸುಪ್ರೀಮ್ ಕೋರ್ಟ್, ಈ ಎಲ್ಲ ವಾದಗಳು ಅನಗತ್ಯ, ರಾಜ್ಯ ಸರಕಾರದ ಇಂತಹಾ ವಾದಗಳು ನ್ಯಾಯಾಧೀಶೆಯ ಸ್ಥೈರ್ಯವನ್ನು ಭಾದಿಸುವ ಸಾಧ್ಯತೆಗಳಿವೆ. ಒಂದು ವೇಳೆ ನ್ಯಾಯಾಲವು ವಾದಗಳನ್ನು ರೆಕಾರ್ಡ್ ಮಾಡುವುದಿಲ್ಲವಾದರೆ ಅಥವಾ ಇನ್ನಿತರ ತಕರಾರುಗಳಿದ್ದರೆ ಮಾತ್ರ ಉನ್ನತ ನ್ಯಾಯಾಲವನ್ನು ಸಂಪರ್ಕಿಸಬಹುದು ಎಂದು ಹೇಳಿದೆ. ಈ ಹಿಂದೆ ಕೇರಳ ಸರಕಾರದ ಹಾಗೂ ಮಹಿಳಾ ನಟಿಯ ವಾದವನ್ನು ಕೇರಳ ಹೈಕೋರ್ಟ್ ಕೂಡಾ ತಿರಸ್ಕರಿಸಿತ್ತು.