"ಹಿಂದೂ ಗಲಭೆಕೋರರ ಜೊತೆ ಸೇರಿ ಮುಸ್ಲಿಮನೊಬ್ಬ ಮತ್ತೊಬ್ಬ ಮುಸ್ಲಿಮನನ್ನು ಕೊಂದನೆಂಬ ವಾದ ಸ್ವೀಕಾರಾರ್ಹವಲ್ಲ"

Update: 2020-12-15 12:24 GMT

ಹೊಸದಿಲ್ಲಿ,ಡಿ.15: “ಅರ್ಜಿದಾರ ಒಬ್ಬ ಮುಸ್ಲಿಂ ಆಗಿರುವುದರಿಂದ, ಹೆಚ್ಚಾಗಿ ಹಿಂದು ಸಮುದಾಯದವರೇ ಇದ್ದ 'ಅಕ್ರಮ ಕೂಟ'ದ ಸದಸ್ಯರ ಜತೆಗೆ ಸೇರಿಕೊಂಡು ಉದ್ವಿಗ್ನತೆಯ ವಾತಾವರಣದಲ್ಲಿ ಮುಸ್ಲಿಂ ಹುಡುಗನೊಬ್ಬನನ್ನು ಥಳಿಸಿ ಸಾಯಿಸುತ್ತಾನೆ ಎನ್ನುವ ವಾದ ಸ್ವೀಕಾರಾರ್ಹವಲ್ಲ” ಎಂದು ಈಶಾನ್ಯ ದಿಲ್ಲಿ ಗಲಭೆ ಸಂಬಂಧದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬನಿಗೆ ಜಾಮೀನು ನೀಡುವ ವೇಳೆ ದಿಲ್ಲಿಯ ಕರ್ಕಡೂಮ ನ್ಯಾಯಾಲಯ ಹೇಳಿದೆ.

ಗಲಭೆ ಸಂದರ್ಭ ಮುಸ್ಲಿಂ ಯುವಕರಾದ ಝಾಕಿರ್ ಹಾಗೂ ಅಶ್ಫಖ್ ಹುಸೈನ್ ಎಂಬ ಇಬ್ಬರ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ  ಆರಿಫ್ ಎಂಬ ವ್ಯಕ್ತಿ ಸಲ್ಲಿಸಿದ್ದ ಎರಡು ಜಾಮೀನು ಅರ್ಜಿಗಳ ವಿಚಾರಣೆ ವೇಳೆ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ವಿನೋದ್ ಯಾದವ್ ಡಿಸೆಂಬರ್ 11ರಂದು ಮೇಲಿನಂತೆ ಹೇಳಿದ್ದಾರೆ.

ಅರ್ಜಿದಾರ ಅಕ್ರಮ ಕೂಟದ ಭಾಗವಾಗಿ ಆಸ್ತಿಪಾಸ್ತಿ ಹಾಗೂ ಇತರ ಸಮುದಾಯದ ಮಂದಿಯ ಜೀವಕ್ಕೆ ಹಾನಿಯುಂಟು ಮಾಡಿದ್ದಾನೆಂದು ಆರೋಪಿಸಲಾಗಿತ್ತು.

ಘಟನೆಯಲ್ಲಿ ಮುಸ್ಲಿಂ ಹುಡುಗನೊಬ್ಬ ಮೃತಪಟ್ಟಿದ್ದು ಈ ಪ್ರಕರಣದ ಎಲ್ಲಾ ಆರೋಪಿಗಳು ಹಿಂದುಗಳಾಗಿರುವಾಗ  ಮುಸ್ಲಿಂ ಯುವಕನೊಬ್ಬ (ಜಾಮೀನು ಅರ್ಜಿದಾರ) ಹಿಂದು ಸಮುದಾಯದವರೇ ಹೆಚ್ಚಿದ್ದ ಇಂತಹ ಉದ್ರಿಕ್ತ ಗುಂಪಿನ  ಭಾಗವಾಗಿರುತ್ತಾನೆ ಎಂಬ ಆರೋಪ ಆಘಾತಕರ ಎಂದು ಆತನ ಪರ ವಕೀಲರು ತಮ್ಮ ವಾದ ಮಂಡನೆ ವೇಳೆ ಹೇಳಿದ್ದರು.

ಆದರೆ ಅರ್ಜಿದಾರ ಅಕ್ರಮ ಕೂಟದ ಭಾಗವಾಗಿದ್ದ ಹಾಗೂ ಆ ಇಬ್ಬರು ಯುವಕರಿಗೆ  ಹಲ್ಲೆ ನಡೆಸಿ ಅಂತಿಮವಾಗಿ ಅವರ ಸಾವಿಗೆ ಕಾರಣವಾಗಿದ್ದ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕರು ವಾದಿಸಿದ್ದರು.

ಪ್ರಕರಣದ ಇತರ ಆರೋಪಿಗಳಾದ ಅಜಯ್, ಅಶೋಕ್ ಕುಮಾರ್, ಶುಭಂ ಹಾಗೂ ಜಿತೇಂದರ್ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದರಿಂದ ಈ ಅಪೀಲನ್ನೂ ತಿರಸ್ಕರಿಸಬೇಕೆಂದು ಅವರು ಕೋರಿದ್ದರು.

ಆದರೆ ಅರ್ಜಿದಾರ ಅಕ್ರಮ ಕೂಟದ ಭಾಗವಾಗಿದ್ದ ಎಂದು ಹೊರನೋಟಕ್ಕೆ ತಿಳಿಯುವುದಿಲ್ಲ ಹಾಗೂ ಆತ ಈ ಹಲ್ಲೆ ನಡೆಸಿದ್ದಾನೆಂಬುದಕ್ಕೆ ಸಿಸಿಟಿವಿ ವೀಡಿಯೋ ದೃಶ್ಯಗಳು ದೊರಕಿಲ್ಲ. ಈತ ಈ ಘಟನೆ ಸಂದರ್ಭ ನಿರ್ದಿಷ್ಟವಾಗಿ ಏನು ಮಾಡಿದ್ದ ಎಂಬುದನ್ನೂ ಪ್ರತ್ಯಕ್ಷದರ್ಶಿ ಸಾಕ್ಷಿಗಳು ಹೇಳಿಲ್ಲ ಎಂದು ಹೇಳಿದ ನ್ಯಾಯಾಲಯವು ಆತನ ಜಾಮೀನು ಅರ್ಜಿಯನ್ನು ಅಂಗೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News