ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಉದ್ಯಾವರ, ಡಿ.15: ಬೆಂಗಳೂರು ಚಾಮರಾಜಪೇಟೆಯ ಆಯುರ್ವೇದ ಅಕಾಡೆಮಿ ಸ್ವಾಸ್ಥ್ಯಮಾಸದ ಪ್ರಯುಕ್ತ ಆಯೋಜಿಸಿದ್ದ ಅಂತರ್ ಆಯುರ್ವೇದ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಉದ್ಯಾವರದಲ್ಲಿರುವ ಶ್ರೀಧರ್ಮಸ್ಥಳ ಮಂಜುನಾಥ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಗಳ ತಂಡ ಅತ್ಯುತ್ತಮ ಸಾಧನೆಯೊಂದಿಗೆ ಸತತ ಮೂರನೆ ಬಾರಿ ಸಮಗ್ರ ಪ್ರಶಸ್ತಿಯನ್ನು ಗೆದ್ದು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಮೊದಲ ಹಂತದಲ್ಲಿ ನಡೆದ ಆನ್‌ಲೈನ್ ಸ್ಪರ್ಧೆಗಳಲ್ಲಿ ಕಾಲೇಜಿನ 15ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ ಆಯ್ಕೆಯಾದ 9 ಮಂದಿ ವಿದ್ಯಾರ್ಥಿಗಳ ತಂಡ ಕಾಲೇಜಿನ ಸ್ವಸ್ಥ ವೃತ್ತ ವಿಭಾಗದ ಪ್ರಾಧ್ಯಾಪಕರಾದ ಡಾ.ಶ್ರೀನಿಧಿ ಧನ್ಯ ಅವರ ನೇತೃತ್ವದಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆ ತೋರಿದೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾಲೇಜಿನ ಸನತ್ ಕುಮಾರ್ ಪ್ರಥಮ ಹಾಗೂ ಮಹತಿ ಚಾತ್ರ ದ್ವಿತೀಯ ಬಹುಮಾನವನ್ನೂ, ಚರ್ಚಾ ಸ್ಪರ್ಧೆಯಲ್ಲಿ ಆತ್ರೇಯ ನಾರಾಯಣ ಪ್ರಥಮ ಮತ್ತು ಸನತ್ ಕುಮಾರ್ ದ್ವಿತೀಯ ಸ್ಥಾನವನ್ನೂ ಗೆದ್ದುಕೊಂಡರು.
ಭಾಷಣ ಸ್ಪರ್ಧೆಯಲ್ಲಿ ಆತ್ರೇಯ ನಾರಾಯಣ ಪ್ರಥಮ ಮತ್ತು ಮಹತಿ ಚಾತ್ರ ದ್ವಿತೀಯ ಬಹುಮಾನವನ್ನೂ, ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಶಿವಾನಿ ಕಾರಂತ್ ದ್ವಿತೀಯ ಮತ್ತು ಶುಭ ಎಸ್ ಭಟ್ ತೃತೀಯ ಸ್ಥಾನವನ್ನೂ, ಪ್ರಬಂಧ ಸ್ಪರ್ಧೆ ಯಲ್ಲಿ ರಮ್ಯ ಎಸ್ ದ್ವಿತೀಯ ಬಹುಮಾನ ವನ್ನೂ, ಆಶು ಭಾಷಣ ಸ್ಪರ್ಧೆಯಲ್ಲಿ ಅಯುಧ ಕೆಂಭಾವಿ ದ್ವಿತೀಯ ಮತ್ತು ಆತ್ರೇಯ ನಾರಾಯಣ ತೃತೀಯ ಬಹುಮಾನವನ್ನು ಗಳಿಸಿದರು.