ಸೌದಿ ಅರೇಬಿಯಾ: ಮೂರು ಹಂತಗಳಲ್ಲಿ ಕೋವಿಡ್-19 ಲಸಿಕೆ ಅಭಿಯಾನ ಘೋಷಣೆ

Update: 2020-12-15 14:25 GMT

ರಿಯಾದ್,ಡಿ.15: ಫೈಝರ್-ಬಯೋಎಂಟೆಕ್ ಕೋವಿಡ್ ಲಸಿಕೆಯು ಅನುಮೋದನೆಗೊಂಡ ಬಳಿಕ ಹಲವು ರಾಷ್ಟ್ರಗಳು ತಮ್ಮ ನಾಗರಿಕರಿಗೆ ಲಸಿಕೆ ನೀಡುವ ಪೂರ್ವ ತಯಾರಿಯನ್ನು ಪ್ರಾರಂಭಿಸಿದೆ. ಅಮೆರಿಕಾದಲ್ಲಿ ನಿನ್ನೆ ತಾನೇ ಲಸಿಕೆ ನೀಡಿಕೆಯು ಆರಂಭವಾಗಿತ್ತು. ಇದೀಗ ಮೂರು ಹಂತಗಳಲ್ಲಿ ಕ್ರಮವಾಗಿ ಕೋವಿಡ್ ಲಸಿಕೆಯನ್ನು ನೀಡಲಾಗುವುದು ಎಂದು ಸೌದಿ ಅರೇಬಿಯಾ ಘೋಷಿಸಿದೆ.

ಮೊದಲ ಹಂತದಲ್ಲಿ 65 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡಲಾಗುವುದು. ಬಳಿಕ 50 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ನೀಡಲಾಗುವುದು. ಕೊನೆಯದಾಗಿ ಎಲ್ಲ ನಾಗರಿಕರಿಗೆ ಲಸಿಕೆಯನ್ನು ನೀಡಲಾಗುವುದು ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಅಭಿಯಾನಕ್ಕೆ ತಗಲುವ ನಿರ್ದಿಷ್ಟ ಸಮಯದ ಕುರಿತು ಇದುವರೆಗೂ ಹೇಳಿಕೆ ನೀಡಿಲ್ಲ.

ಕೋವಿಡ್ ಲಸಿಕೆ ನೀಡುವಲ್ಲಿ ಬಹರೈನ್ ಬಳಿಕ ಸೌದಿ ಅರೇಬಿಯಾವು ಎರಡನೇ ಗಲ್ಫ್ ರಾಷ್ಟ್ರವಾಗಿದೆ. ಸೌದಿಯಲ್ಲಿ 3.4ಕೋಟಿ ಜನಸಂಖ್ಯೆಯಿದ್ದು, ದೇಶದ ಎಲ್ಲ ನಾಗರಿಕರು ಮತ್ತು ನಿವಾಸಿಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು ಎಂದು ಅಧಿಕೃತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News