ಸಿಐಟಿಯುನಿಂದ ಭೂಸೂಧಾರಣಾ ಕಾಯ್ದೆ ತಿದ್ದುಪಡಿ ಪ್ರತಿಗೆ ಬೆಂಕಿ
ಉಡುಪಿ, ಡಿ.15: ಕಟ್ಟಡ ಕಾರ್ಮಿಕರ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯ ನೇತೃತ್ವ ದಲ್ಲಿ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸ ಲಾಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಮಿಕರ ಅರ್ಜಿಗಳು ಸೇವಾ ಸಿಂಧುವಿನಲ್ಲಿ ಸಲ್ಲಿಸುವುದನ್ನು ಸ್ಥಗಿತಗೊಳಿಸಿದೆ. ಇದರಿಂದ ಸಮಸ್ಯೆಯಾಗಿ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿವೆ. ಆದುದರಿಂದ ಅರ್ಜಿ ಅವಧಿ ವಿಸ್ತರಣೆ ಹಾಗೂ ಅಧಿಕಾರಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಮಂಡಳಿಯ ನಿಯಮ ಪ್ರಕಾರ ಎಲ್ಲ ಅರ್ಜಿಗಳು ಈ ಹಿಂದೆ ಇದ್ದ ಆರು ತಿಂಗಳ ಕಾಲ ಮಿತಿಯನ್ನು ಒಂದು ವರ್ಷದವರೆಗೆ ವಿಸ್ತರಿಸಬೇಕು. ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಸರಕಾರ ಮಂಡಳಿ ಮೂಲಕ ಘೋಷಿಸಿದ 5000ರೂ. ಪರಿಹಾರ ಮೊತ್ತ ಕೆಲವು ಕಾರ್ಮಿಕರಿಗೆ ಜಮೆ ಯಾಗದೆ ಬಾಕಿ ಉಳಿದಿದ್ದು, ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸರಕಾರ ಬಾಕಿ ಇರಿಸಿರುವ ಇಎಸ್‌ಐ ಹಣವನ್ನು ಕೂಡಲೇ ಪಾವತಿಸಿ ಕಾರ್ಮಿಕರಿಗೆ ಆಗುತ್ತಿರುವ ತೊಂದರೆ ಯನ್ನು ಪರಿಹರಿಸಬೇಕು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮರಳು ಸಮಸ್ಯೆ ಕಡಿಮೆ ಆದರೂ ನಿಗದಿಪಡಿಸಿರುವ ದರ ಹೆಚ್ಚಾಗಿದೆ. ಆದುದರಿಂದ ಇದನ್ನು ಕೂಡಲೇ ಸರಿಪಡಿಸೇಕು ಎಂದು ಅವರು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸರಕಾರ ಅಂಗೀಕರಿಸಿದ ಭೂಸೂಧಾರಣಾ ಕಾಯಿದೆ ತಿದ್ದುಪಡಿ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ಜಿಲ್ಲಾಧಿಕಾರಿ ಜಿ.ಜಗದೀಶ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸ ಲಾಯಿತು.
ಧರಣಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ದಾಸ ಭಂಡಾರಿ, ಉಡುಪಿ ಜಿಲ್ಲಾ ಕೋಶಾಧಿಕಾರಿ ಗಣೇಶ್ ನಾಯಕ್, ಬೈಂದೂರು ತಾಲೂಕು ಕೋಶಾಧಿಕಾರಿ ರೋನಾಲ್ಡ್ ರಾಜೇಶ್ ಕ್ವಾಡ್ರಸ್, ಮುಖಂಡರಾದ ಬಲ್ಕೀಸ್, ಮಹಾಬಲ ವಡೇರಹೋಬಳಿ, ಕವಿ ರಾಜ್, ಭಾರತಿ, ಶಶಿಧರ ಗೊಲ್ಲ, ಸುಭಾಷ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.