ಭಾರತದಲ್ಲಿ ವಾಟ್ಸ್ಆ್ಯಪ್ ಪಾವತಿ ಸೇವೆಗೆ ಹೆಚ್ಚು ಒತ್ತು ನೀಡಿದ ಫೇಸ್‌ಬುಕ್
ಹೊಸದಿಲ್ಲಿ, ಡಿ.15: ಭಾರತದಲ್ಲಿ ವಾಟ್ಸ್ಆ್ಯಪ್ ಪಾವತಿ ಸೇವೆಗೆ ಹೆಚ್ಚು ಒತ್ತು ನೀಡಲು ಫೇಸ್‌ಬುಕ್ ಮುಂದಾಗಿರುವಂತೆಯೇ, ಭಾರತವು ಗಮನಾರ್ಹ ಉದ್ಯಮಶೀಲತೆ ಸಂಸ್ಕೃತಿಯನ್ನು ಹೊಂದಿರುವ ವಿಶೇಷ ಮತ್ತು ಪ್ರಮುಖ ದೇಶವಾಗಿದೆ ಎಂದು ಫೇಸ್‌ಬುಕ್ ಸಿಇಒ ಮಾರ್ಕ್ ಝಕರ್‌ಬರ್ಗ್ ಮಂಗಳವಾರ ಹೇಳಿದ್ದಾರೆ.
ಭಾರತದಲ್ಲಿ ಪಾವತಿ ಸೇವೆ ಆರಂಭಿಸಲು ಫೇಸ್‌ಬುಕ್ ಮಾಲಕತ್ವದ ವಾಟ್ಸ್ಆ್ಯಪ್ ಸಲ್ಲಿಸಿದ್ದ ಪ್ರಸ್ತಾವನೆಗೆ ಕಳೆದ ತಿಂಗಳು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ(ಎನ್‌ಪಿಸಿಐ) ಅನುಮೋದನೆ ನೀಡಿದೆ. 2018ರಲ್ಲಿ ಭಾರತದಲ್ಲಿ ಯುಪಿಐ ಆಧಾರಿತ ಪಾವತಿ ಸೇವೆಯನ್ನು ವಾಟ್ಸ್ಆ್ಯಪ್ ಪ್ರಾಯೋಗಿಕವಾಗಿ ಆರಂಭಿಸಿತ್ತು. ವಿವಿಧ ಆ್ಯಪ್‌ಗಳ ಮೂಲಕ ತಕ್ಷಣ ಪಾವತಿಯನ್ನು ಸ್ವೀಕರಿಸಲು ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್(ಯುಪಿಐ) ವ್ಯವಸ್ಥೆ ಅನುಕೂಲವಾಗಿದೆ. ನಾವು ಭಾರತದಲ್ಲಿ ಕಳೆದ ತಿಂಗಳಷ್ಟೇ ವಾಟ್ಸ್ಆ್ಯಪ್ ಪಾವತಿಯನ್ನು ಆರಂಭಿಸಿದ್ದು ಈಗ ನೀವು ಸಂದೇಶ ರವಾನಿಸಿದಷ್ಟೇ ಸುಲಭವಾಗಿ ನಿಮ್ಮ ಮಿತ್ರರಿಗೆ ಮತ್ತು ಕುಟುಂಬದವರಿಗೆ ವಾಟ್ಸ್ಆ್ಯಪ್ ಮೂಲಕ ಪಾವತಿ ರವಾನಿಸಬಹುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಜತೆ ನಡೆಸಿದ ಅನೌಪಚಾರಿಕ ಸಂವಾದದ ಸಂದರ್ಭ ಝಕರ್‌ಬರ್ಗ್ ಹೇಳಿದ್ದಾರೆ.
ದೇಶದಲ್ಲಿ ಸಂಪರ್ಕ ವ್ಯವಸ್ಥೆ ಎಲ್ಲರಿಗೂ ಕೈಗೆಟಕುವಂತಾಗಬೇಕು ಎಂಬ ದಿವಂಗತ ಧೀರೂಭಾಯ್ ಅಂಬಾನಿಯವರ ಪರಿಕಲ್ಪನೆಯನ್ನು ಸ್ಮರಿಸಿಕೊಂಡ ಝಕರ್‌ಬರ್ಗ್, ಈಗ ಭಾರತೀಯರು ಪೋಸ್ಟ್ ಕಾರ್ಡ್‌ನ ವೆಚ್ಚಕ್ಕಿಂತಲೂ ಕಡಿಮೆ ಖರ್ಚಿನಲ್ಲಿ ಪರಸ್ಪರ ಸಂವಹನ ನಡೆಸಬಹುದಾಗಿದೆ. ಈಗ ಇದನ್ನೇ ಪಾವತಿ ಸೇವೆಗೂ ಅನ್ವಯಿಸಲು ನಾವು ಮುಂದಾಗಿದ್ದೇವೆ. ಎನ್‌ಪಿಸಿಐ ಅನುಮೋದನೆಯ ಬಳಿಕ ಭಾರತದಲ್ಲಿ ಹಂತ ಹಂತವಾಗಿ ಪಾವತಿ ಸೇವೆ ಆರಂಭಿಸಿದೆ ಎಂದವರು ಹೇಳಿದ್ದಾರೆ. ನವೀನ ಹೊಸ ವ್ಯವಹಾರ ಮಾದರಿಗಳನ್ನು ಸದೃಢಗೊಳಿಸಲು ಸ್ಥಳೀಯ ದಕ್ಷತೆ ಮತ್ತು ತಂತ್ರಜ್ಞಾನ ಸಾಮರ್ಥ್ಯವನ್ನು ಭಾರತ ನಿರ್ಮಿಸುತ್ತಿದೆ.
ಮತ್ತು ಭಾರತೀಯ ನಾಗರಿಕರಿಗೆ ಡಿಜಿಟಲ್ ಮತ್ತು ಆರ್ಥಿಕ ಸೇರ್ಪಡೆಗೆ ಹೆಚ್ಚಿನ ಪ್ರವೇಶಾವಕಾಶ ಒದಗಿಸುತ್ತಿದೆ ಎಂದು ಝಕರ್‌ಬರ್ಗ್ ಹೇಳಿದ್ದಾರೆ. ಜಿಯೋ ವೇದಿಕೆಯಲ್ಲಿ 43,574 ಕೋಟಿ ರೂ. ಹೂಡಿಕೆ ಮಾಡುವುದಾಗಿ ಕಳೆದ ಎಪ್ರಿಲ್‌ನಲ್ಲಿ ಫೇಸ್‌ಬುಕ್ ಘೋಷಿಸಿತ್ತು. ಉಭಯ ಸಂಸ್ಥೆಗಳ ಈ ಸಹಭಾಗಿತ್ವ ಭಾರತ, ಭಾರತೀಯರು ಮತ್ತು ಭಾರತದ ಸಣ್ಣ ಉದ್ದಿಮೆಗಳಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಮಾತಿಗಿಂತ ಕೃತಿಯಲ್ಲೇ ನಾವು ಸಾಧಿಸಲಿದ್ದೇವೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಕೇಶ್ ಅಂಬಾನಿ ಹೇಳಿದರು.