×
Ad

ಎಂ.ಎನ್.ಹೆಗಡೆ, ಸದಾಶಿವ ರಾವ್‌ಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ

Update: 2020-12-16 18:49 IST
ಎಂ.ಎನ್.ಹೆಗಡೆ, ಸಾಂತಾರು ಸದಾಶಿವ ರಾವ್

ಉಡುಪಿ, ಡಿ.16: ಉಡುಪಿಯ ಯಕ್ಷಗಾನ ಕಲಾರಂಗ ಅರ್ಥಧಾರಿ, ಲೇಖಕ ಪೆರ್ಲ ಕೃಷ್ಣ ಭಟ್ ಹಾಗೂ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ನೆನಪಿನಲ್ಲಿ ನೀಡುವ ಯಕ್ಷಗಾನ ಪ್ರಶಸ್ತಿಗೆ ಅನುಕ್ರಮವಾಗಿ ಅರ್ಥಧಾರಿ, ಲೇಖಕ, ನಿವೃತ್ತ ಉಪನ್ಯಾಸಕ ಎಂ.ಎನ್.ಹೆಗಡೆ ಯಲ್ಲಾಪುರ ಹಾಗೂ ಹಿರಿಯ ಅರ್ಥಧಾರಿ, ಪ್ರವಚನಕಾರ ಸಾಂತೂರು ಸದಾಶಿವ ರಾವ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 20,000ರೂ. ನಗದು ಪುರಸ್ಕಾರ ಸಹಿತ, ಶಾಲು, ಸ್ಮರಣಿಕೆ ಹಾಗೂ ಪ್ರಶಸ್ತಿ ಪರಿಕರಗಳನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿ.25ರ ಸಂಜೆ 5 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಾಲ್ವರು ಕಲಾವಿದರಿಗೆ ನೆರವು: ಅಮೆರಿಕದ ಯಕ್ಷಗಾನ ಕಲಾವೃಂದದ ಸದಸ್ಯರು ನಾಲ್ವರು ಯಕ್ಷಗಾನ ಕಲಾವಿದರಾದ ಚಕ್ರಮೈದಾನ ಕೃಷ್ಣ ಪೂಜಾರಿ, ಬಾಲಕೃಷ್ಣ ನಾಯಕ್, ಶಂಯ್ಯ ಕಂಜರ್ಪಣೆ ಹಾಗೂ ಕಲ್ಲಗುಡ್ಡೆ ಲಕ್ಷ್ಮಣ ಇವರಿಗೆ ತಲಾ 25,000ರೂ. ಆರ್ಥಿಕ ನೆರವು ನೀಡಿದ್ದಾರೆ.

ಕರೋನದ ಸಂಕಷ್ಟದ ಕಾಲದಲ್ಲಿ ಯಕ್ಷಗಾನ ವೃತ್ತಿ ಕಲಾವಿದರ ಕಷ್ಟವನ್ನರಿತು ದೊಡ್ಡ ಮೊತ್ತದ ನೆರವು ನೀಡಿದ, ಅಮೆರಿಕದಲ್ಲಿದ್ದು ನಾಡಿನ ಕಲೆಯ ಉಳಿವು ಬೆಳವಣಿಗೆಗೆ ಸದಾ ಚಿಂತಿಸುತ್ತಿರುವ ಅಮೆರಿಕ ಕಲಾವೃಂದದ ಮಿತ್ರರನ್ನು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News