ಕೇರಳದ ಜನತೆಯ ಹೃದಯದಲ್ಲಿ ಜಾತ್ಯತೀತತೆ ಇದೆ, ಆದ್ದರಿಂದಲೇ ಎಡರಂಗದ ಮೇಲೆ ಭರವಸೆಯಿಟ್ಟಿದ್ದಾರೆ: ಪಿಣರಾಯಿ ವಿಜಯನ್

Update: 2020-12-16 16:55 GMT

ತಿರುವನಂತಪುರಂ,ಡಿ.16: ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಇಂದು ಬಿಡುಗಡೆಯಾಗಿದ್ದು, ಎಲ್’ಡಿಎಫ್ ಸ್ಪಷ್ಟ ಮುನ್ನಡೆ ಸಾಧಿಸಿದೆ. ಕೇರಳ ಚುನಾವಣಾ ಆಯೋಗದ ಪ್ರಕಾರ ಒಟ್ಟು 941 ಗ್ರಾಮ ಪಂಚಾಯತ್ ಗಳಲ್ಲಿ ಎಡರಂಗವು 516 ಕ್ಷೇತ್ರಗಳಲ್ಲಿ ಸ್ಪಷ್ಟ ಮುನ್ನಡೆಯನ್ನು ಪಡೆದಿದ್ದು, ಯುಡಿಎಫ್ 375 ಗ್ರಾಮ ಪಂಚಾಯತ್ ಗಳಲ್ಲಿ ಹಾಗೂ ಎನ್’ಡಿಎ ಒಟ್ಟು 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಈ ಕುರಿತು ಕೇರಳದ ಜನತೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಇದು ಕೇರಳದ ಸರ್ವ ಜನತೆಯ ವಿಜಯವಾಗಿದೆ. ಈ ಫಲಿತಾಂಶದ ಮೂಲಕ ಕೇರಳವನ್ನು ನಾಶಪಡಿಸಲು ಮತ್ತು ಕೇರಳದ ಸಾಧನೆಯನ್ನು ಕೀಳಾಗಿ ಚಿತ್ರೀಕರಿಸುವ ಎಲ್ಲಾ ತಂತ್ರಗಳು ವಿಫಲಗೊಂಡಿದೆ. ಯುಡಿಎಫ್ ಮತ್ತು ಅವಕಾಶವಾದಿ ಪಕ್ಷಗಳಿಗೆ ಕೇರಳದಲ್ಲಿ ಯಾವುದೇ ನೆಲೆ ಇಲ್ಲ ಎನ್ನುವುದನ್ನು ಈ ಫಲಿತಾಂಶವು ಸಾಬೀತುಪಡಿಸಿದೆ”

“ಗ್ರಾಮ ಪಂಚಾಯತ್ ಗಳಲ್ಲಿ ಜನತೆಯು ಎಲ್’ಡಿಎಫ್ ಗೆ ಉತ್ತಮ ಪ್ರತಿಕ್ರಿಯೆಯನ್ನು ತೋರಿದ್ದಾರೆ. ಯುಡಿಎಫ್ ಪ್ರಾಬಲ್ಯವಿದ್ದ ಹಲವಾರು ಪ್ರದೇಶಗಳಲ್ಲಿ ಎಲ್’ಡಿಎಫ್ ತನ್ನ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇದು ಜನರು ಯುಡಿಎಫ್ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿರುವುದರ ಸೂಚನೆಯಾಗಿದೆ. ಕೇರಳದ ಜನತೆಯ ಹೃದಯದಲ್ಲಿ ಜಾತ್ಯತೀತತೆ ಎಂದಿಗೂ ನೆಲೆಗೊಂಡಿರುವುದರಿಂದಲೇ ಜನತೆ ಎಲ್’ಡಿಎಫ್ ಪರ ಒಲವು ತೋರಿದ್ದಾರೆ. ರಾಜ್ಯ ಸರಕಾರ ಇನ್ನೂ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಿದ್ದು, ಎಲ್ಲ ಮತದಾರರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News