ಡಿ.17 : ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶ್ರೀವಿಶ್ವೇಶತೀರ್ಥರ ಪ್ರಥಮ ಆರಾಧನೆ
Update: 2020-12-16 21:46 IST
ಉಡುಪಿ, ಡಿ.16: ಕಳೆದ ವರ್ಷ ನಿಧನರಾದ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರ ಪ್ರಥಮ ಆರಾಧನೆ ಡಿ.17ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಬೆಳಗ್ಗೆ 10:30ಕ್ಕೆ ಗುರುಗಳ ಪ್ರಥಮ ಆರಾಧನೆ ನಡೆಯಲಿದ್ದು, ಶ್ರೀವಿಶ್ವೇಶ ತೀರ್ಥರ ಕುರಿತು ಪುಸ್ತಕವನ್ನು ಬಿಡುಗಡೆಗೊಳಿಸಲಾಗುವುದು. ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ಸಂದೇಶ ನೀಡಲಿದ್ದಾರೆ. ಶ್ರೀಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥರು ವಿಶೇಷ ಸಂಸ್ಮರಣೆ ನಡೆಸಿಕೊಡಲಿದ್ದಾರೆ.
ಸಂಜೆ 4:30ಕ್ಕೆ ರಾಜಾಂಗಣದಲ್ಲಿ ಗುರುಗಳ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ. ಪರ್ಯಾಯ ಶ್ರೀಗಳೊಂದಿಗೆ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಸಂದೇಶ ನೀಡಲಿದ್ದಾರೆ ಎಂದು ಶ್ರೀಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.