ಕೊರೋನ ಸೋಂಕಿನಿಂದ ಮೃತಪಟ್ಟ ನೂರಾರು ವ್ಯಕ್ತಿಗಳನ್ನು ಅಂಕಿ-ಅಂಶದಲ್ಲಿ ಕೈಬಿಟ್ಟ ಗುಜರಾತ್ ಸರಕಾರ
ಹೊಸದಿಲ್ಲಿ, ಡಿ. 16: ಗುಜರಾತ್‌ನಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟ ನೂರಾರು ವ್ಯಕ್ತಿಗಳನ್ನು ರಾಜ್ಯದ ಅಧಿಕೃತ ಮರಣದ ಅಂಕಿ-ಅಂಶಗಳಲ್ಲಿ ಸೇರ್ಪಡೆಗೊಳಿಸಿಲ್ಲ ಎಂದು ‘ದೈನಿಕ್ ಭಾಸ್ಕರ್’ನ ವರದಿ ಹೇಳಿದೆ. ಯಾವುದೇ ಆಸ್ಪತ್ರೆಗೆ ಭೇಟಿ ನೀಡದ ಅಥವಾ ಯಾವುದೇ ಚಿಕಿತ್ಸೆ ಪಡೆಯದ ಈ ವ್ಯಕ್ತಿಗಳ ಅಂತ್ಯ ಸಂಸ್ಕಾರವನ್ನು ಕೋವಿಡ್-19ನಿಂದ ಮೃತಪಟ್ಟವರ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ವಿಧಿಸಲಾಗಿರುವ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ನಡೆಸಲಾಯಿತು.
ಈ ಪೈಕಿ ಕೊರೋನ ಲಕ್ಷಣ ಕಾಣಿಸಿಕೊಂಡ ಶೇ. 5ರಷ್ಟು ಮೃತದೇಹಗಳನ್ನು ಮಾತ್ರ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. 2020 ಮಾರ್ಚ್‌ನಿಂದ 500 ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಗೆ ತರಲಾಗಿತ್ತು. ಇದರಲ್ಲಿ 200 ಮೃತದೇಹಗಳಲ್ಲಿ ಕೊರೋನ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದರೂ ಕೇವಲ 10 ಮೃತದೇಹಗಳನ್ನು ಮಾತ್ರ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಮೂರು ಮೃತದೇಹಗಳಲ್ಲಿ ಮಾತ್ರ ಕೊರೋನ ಪಾಸಿಟಿವ್ ಕಂಡು ಬಂದಿತ್ತು. ಇದರಿಂದಾಗಿ ಪ್ರತಿ ಮೂವರಲ್ಲಿ ಒಬ್ಬರಿಗೆ ಕೊರೋನ ಸೋಂಕು ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಕೊರೋನ ಪಾಸಿಟಿವ್ ಎಂದು ವರದಿಯಾಗಿದ್ದ ಮೂವರು ವ್ಯಕ್ತಿಗಳ ಸಾವಿಗೆ ಕೊರೋನ ಸೋಂಕು ಕಾರಣ ಎಂದು ಗುರುತಿಸಲಾಗಿತ್ತಾದರೂ ಸೂರತ್ ನಗರ ಸಭೆ ಡಾ. ಮೋಹನ್ ಬಾಬುಬಾ ಗಾಮಿತ್ ಅವರ ಸಾವನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಆದರೆ, ಸೂರತ್ ಮುನ್ಸಿಪಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಎಸ್‌ಎಂಐಎಂಇಆರ್) ಆಸ್ಪತ್ರೆಯ ಕೋವಿಡ್-19 ವಾರ್ಡ್‌ನಲ್ಲಿ ಕೆಲಸ ಮಾಡಿದ ಗಾಮಿತ್ ಅವರು ಮೃತಪಟ್ಟ ಒಂದು ದಿನದ ಬಳಿಕ ಗಾಮಿತ್ ಅವರ ಮೃತದೇಹವನ್ನು ಕೊರೋನ ರ್ಯಾಪಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಪರೀಕ್ಷೆಯಲ್ಲಿ ಅವರಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿತ್ತು ಹಾಗೂ ಮರಣ ಪ್ರಮಾಣ ಪತ್ರದಲ್ಲಿ ಅವರ ಸಾವಿಗೆ ಕೊರೋನ ಸೋಂಕು ಕಾರಣ ಎಂದು ಗುರುತಿಸಲಾಗಿತ್ತು. ಕೊರೋನ ರೋಗ ಲಕ್ಷಣ ಇರುವ ಎಲ್ಲ 200 ಮೃತದೇಹಗಳ ಪರೀಕ್ಷೆ ನಡೆಸಿದ್ದರೆ ಬಹುಶಃ 60 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುತ್ತಿತ್ತು. ಒಂದು ವೇಳೆ ಎಲ್ಲ 500 ಮೃತದೇಹಗಳನ್ನು ಪರೀಕ್ಷೆಗೆ ಒಳಪಡಿಸಿದ್ದರೆ, ಈ ಅಂಕಿ-ಅಂಶ ಇನ್ನೂ ಏರಿಕೆಯಾಗುತ್ತಿತ್ತು ಎಂದು ವರದಿ ಹೇಳಿದೆ. ‘‘ಕೊರೋನ ರೋಗ ಲಕ್ಷಣ ಇರುವ 10 ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಯಲ್ಲಿ ಕೊರೋನ ರ್ಯಾಪಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಸುಮಾರು 190 ಮೃತದೇಹಗಳ ಪರೀಕ್ಷೆ ನಡೆಸಿಲ್ಲ. ಈ ಮೃತದೇಹಗಳ ಮರಣೋತ್ತರ ಪರೀಕ್ಷೆ ಮಾತ್ರ ನಡೆಸಲಾಗಿತ್ತು’’ ಎಂದು ವರದಿ ಹೇಳಿದೆ.
ಕೊರೋನ ಸೋಂಕಿಗೆ ಒಳಗಾದವರ ಸಂಪರ್ಕಕ್ಕೆ ಒಳಗಾದವರು ಎಂಬ ಶಂಕೆ ಇರುವವರ ಅಥವಾ ವಿದೇಶ ಪ್ರಯಾಣದ ಇತಿಹಾಸ ಹೊಂದಿರುವವರು ಅಥವಾ ಸಾವಿಗೆ ಕಾರಣವಾದ ಯಾವುದೇ ಗಾಯಗಳಿಲ್ಲದ ಅಥವಾ ಸಾವಿಗೆ ಯಾವುದೇ ವಿವರಣೆ ನೀಡಲು ಸಾಧ್ಯವಾಗದ ಹಾಗೂ ಮೃತಪಟ್ಟಿದ್ದ ವ್ಯಕ್ತಿ ಯುವಕನಾಗಿದ್ದರೆ, ಅಂತಹ ಮೃತದೇಹಗಳನ್ನು ತಂದಾಗ ಮಾತ್ರ ಕೊರೋನ ಪರೀಕ್ಷೆ ನಡೆಸಲಾಗಿತ್ತು ಎಂದು ಅಹ್ಮದಾಬಾದ್‌ನ ಜೆಎಂಇಆರ್‌ಎಸ್ ಮೆಡಿಕಲ್ ಕಾಲೇಜು ಹಾಗೂ ಸಿವಿಲ್ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗುರಂಗ್ ಪಟೇಲ್ ತಿಳಿಸಿದ್ದಾರೆ.
ರಾಜ್ಯದ ವಿವಿಧ ಸ್ಮಶಾನಗಳಲ್ಲಿ ನಡೆಸಲಾದ ಶವ ಸಂಸ್ಕಾರದ ಸಂಖ್ಯೆಗಿಂತ ಗುಜರಾತ್ ಸರಕಾರ ತನ್ನ ಬುಲೆಟಿನ್‌ನಲ್ಲಿ ದಿನಂಪ್ರತಿ ಪ್ರಕಟಿಸಿದ ಸಾವಿನ ಅಂಕಿ-ಅಂಶಗಳು ಕಡಿಮೆ ಇದ್ದುದರಿಂದ ಗುಜರಾತ್‌ನಲ್ಲಿ ಕೊರೋನ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಸಂಶಯ ವ್ಯಕ್ತವಾಗಿದೆ ಎಂದು ಡಾ. ದರ್ಶನ್ ದೇಸಾಯಿ ‘ವೈರ್’ಗೆ ತಿಳಿಸಿದ್ದಾರೆ. ‘‘ಕೊರೋನ ಸೋಂಕಿನಿಂದ ಸಂಭವಿಸಿದ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸಿರುವುದರಲ್ಲಿ ಯಾವುದೇ ಸಂಶಯ ಇಲ್ಲ. ಕೊರನ ಸೋಂಕಿಗೆ ಒಳಗಾಗಿ ಇತರ ಅಸ್ವಸ್ಥತೆಯಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಲೆಕ್ಕ ಮಾಡಬಾರದು ಎಂಬ ಅಲಿಖಿತ ನೀತಿಯನ್ನು ಅನುಸರಿಸಿದಂತೆ ಕಾಣುತ್ತದೆ’’ ಎಂದು ಗುಜರಾತ್ ಚಾಪ್ಟರ್ ಆಫ್ ದಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ. ಚಂದ್ರೇಶ್ ಜರ್ದೋಶ್ ಹೇಳಿದ್ದಾರೆ.