×
Ad

ಜೀವನಾಂಶ ನಿರ್ಧರಿಸುವಾಗ ಏಕರೀತಿಯ ಮಾನದಂಡ ಪಾಲನೆ ಕೋರಿದ ಅರ್ಜಿ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

Update: 2020-12-16 22:09 IST

ಹೊಸದಿಲ್ಲಿ, ಡಿ.16: ವೈವಾಹಿಕ ವಿವಾದದ ಸಂದರ್ಭದಲ್ಲಿ ಜೀವನ ನಿರ್ವಹಣೆ ಮೊತ್ತ ಮತ್ತು ಜೀವನಾಂಶ ನಿರ್ಧರಿಸುವಾಗ ಏಕರೀತಿಯ ಮಾನದಂಡ ಅನುಸರಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ವೈವಾಹಿಕ ಜೀವನಕ್ಕೆ ಸಂಬಂಧಿಸಿದ ವಿವಾದದಲ್ಲಿ ಈಗ ನಿರ್ವಹಣಾ ಮೊತ್ತ ಮತ್ತು ಜೀವನಾಂಶವನ್ನು ನಿರ್ಧರಿಸುವಾಗ ಧರ್ಮ ಮತ್ತು ಲಿಂಗದ ಆಧಾರದಲ್ಲಿ ಪರಿಗಣಿಸಲಾಗುತ್ತಿದೆ. ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯ ಎಸಗದ, ಏಕರೀತಿಯ ಕ್ರಮವನ್ನು ಪಾಲಿಸುವಂತೆ ಸರಕಾರಕ್ಕೆ ಸೂಚಿಸಬೇಕೆಂದು ಕೋರಿ ಬಿಜೆಪಿ ಮುಖಂಡ ಹಾಗೂ ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದರು. ಸಂವಿಧಾನದಲ್ಲಿ ಸರಳವಾದ ನಿಬಂಧನೆಗಳ ಹೊರತಾಗಿಯೂ, ಕೇಂದ್ರ ಸರಕಾರ ಎಲ್ಲಾ ನಾಗರಿಕರಿಗೂ ಲಿಂಗ ತಟಸ್ಥ, ಧರ್ಮ ತಟಸ್ಥ ಏಕರೂಪದ ನಿರ್ವಹಣೆ ಮತ್ತು ಜೀವನಾಂಶವನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ, ಕೇಂದ್ರ ಗೃಹ ಇಲಾಖೆ, ಕಾನೂನು ಮತ್ತು ನ್ಯಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೋಟಿಸ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News