ರಜನಿಕಾಂತ್ ಪಕ್ಷದೊಂದಿಗೆ ಮೈತ್ರಿ ಸಾಧ್ಯತೆಯ ಕುರಿತು ಕಮಲ್ ಹಾಸನ್ ಹೇಳಿದ್ದೇನು ?

Update: 2020-12-16 16:47 GMT

ಚೆನ್ನೈ, ಡಿ. 16: ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ನಟ ರಜನಿಕಾಂತ್ ಅವರ ನೂತನ ಪಕ್ಷದೊಂದಿಗೆ ಮೈತ್ರಿ ಮಾತುಕತೆಗೆ ತನ್ನ ಪಕ್ಷ ಮುಕ್ತವಾಗಿದೆ ಎಂಬ ಸಂದೇಶ ರವಾನಿಸಿರುವ ನಟ ಹಾಗೂ ರಾಜಕಾರಣಿ ಕಮಲಹಾಸನ್, ಎರಡೂ ಪಕ್ಷಗಳು ಸಮಾನ ನೆಲೆಯಲ್ಲಿ ಕಾರ್ಯ ನಿರ್ವಹಿಸಲು ಬಯಸಿದರೆ ಇಂತಹ ಮೈತ್ರಿಯನ್ನು ಖಂಡಿತವಾಗಿ ಪರಿಶೀಲಿಸಲಾಗುವುದು ಎಂದಿದ್ದಾರೆ.

 2018ರಲ್ಲಿ ಘೋಷಣೆಯಾಗಿರುವ ಕಮಲ್‌ಹಾಸನ್ ಅವರ ಮಕ್ಕಳ್ ನೀತಿ ಮೈಯಮ್ (ಎಂಎನ್‌ಎಂ) ಇದುವರೆಗೆ ಯಾವ ಪಕ್ಷದೊಂದಿಗೆ ಕೂಡ ಮೈತ್ರಿ ಮಾಡಿಕೊಂಡಿಲ್ಲ. ರಜನಿಕಾಂತ್ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಮಂಗಳವಾರ ವಿರುದ್ಧುನಗರದಲ್ಲಿ ಪ್ರಚಾರ ನಡೆಸುತ್ತಿದ್ದ ಕಮಲ್ ಹಾಸನ್, ‘‘ನನ್ನಂತೆ ಅವರು ಕೂಡ ಬದಲಾವಣೆಗಾಗಿ ಹೋರಾಡುತ್ತಿದ್ದಾರೆ. ಆದರೆ, ಅವರು ಇನ್ನು ಕೂಡ ತನ್ನ ಪಕ್ಷದ ಸಿದ್ಧಾಂತದ ಬಗ್ಗೆ ವಿಸ್ತೃತವಾಗಿ ಮಾತನಾಡಿಲ್ಲ.

 ಒಟ್ಟಿಗೆ ಕೆಲಸ ಮಾಡಲು ಸಾಧ್ಯವಾದರೆ, ನಾವು ಯಾವುದೇ ಅಹಂ ಇಲ್ಲದೆ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪರಿಶೀಲಿಸಲಿದ್ದೇವೆ’’ ಎಂದರು. ರವಿವಾರ ಮಧುರೈಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವ ಕಮಲ್ ಹಾಸನ್, ಮಧುರೈಯನ್ನು ತಮಿಳುನಾಡಿನ ಎರಡನೇ ನಗರವನ್ನಾಗಿಸುವ ನಟ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಕನಸನ್ನು ನನಸಾಗಿಸಲಿದ್ದೇನೆ ಎಂದು ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News