ಬಜರಂಗದಳದ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮಲ್ಲಿ ಸಾಕ್ಷ್ಯಗಳಿಲ್ಲ: ಫೇಸ್ ಬುಕ್ ಇಂಡಿಯಾ ಮುಖ್ಯಸ್ಥ
ಹೊಸದಿಲ್ಲಿ,ಡಿ.17: ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯವನ್ನು ಬೆಂಬಲಿಸುತ್ತಿರುವ ಬಜರಂಗದಳವು ‘ಅಪಾಯಕಾರಿ ಸಂಘಟನೆ’ ಎಂದು ಫೇಸ್ ಬುಕ್ ನ ಆಂತರಿಕ ಭದ್ರತಾ ಸಮಿತಿಯು ಎಚ್ಚರಿಕೆ ನೀಡಿದ್ದರೂ, ಸಂಘಪರಿವಾರ ಸಂಘಟನೆ ಬಜರಂಗದಳದ ವಿರುದ್ಧ ಕ್ರಮ ಕೈಗೊಳ್ಳಲು ಅಥವಾ ಫೇಸ್ ಬುಕ್ ನಿಂದ ನಿಷೇಧಿಸಲು ನಮ್ಮಲ್ಲಿ ಸರಿಯಾದ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಫೇಸ್ ಬುಕ್ ನ ಭಾರತೀಯ ಮುಖ್ಯಸ್ಥ ಅಜಿತ್ ಮೋಹನ್ ಸಂಸದೀಯ ಸಭೆಯಲ್ಲಿ ತಿಳಿಸಿದ್ದಾರೆ ಎಂದು PTI ವರದಿ ಮಾಡಿದೆ.
ಸಂಘಪರಿವಾರ ಸಂಘಟನೆಯ ಭಾಗವಾಗಿರುವ ಬಜರಂಗದಳವು ಬಲಪಂಥೀಯ ಸಂಘಟನೆ ಆರೆಸ್ಸೆಸ್ ನ ಅಂಗಸಂಸ್ಥೆಯಾಗಿದೆ.
ಕಾಂಗ್ರೆಸ್ ಮುಖಂಡ ಶಶಿ ತರೂರ್ ರವರು ಭಾಗವಹಿಸಿದ್ದ ಮಾಹಿತಿ ಮತ್ತು ತಂತ್ರಜ್ಞಾನ ಸಂಸದೀಯ ಸಭೆಗೆ ಬಳಕೆದಾರರ ಮಾಹಿತಿ ರಕ್ಷಣೆಯ ಕುರಿತು ಚರ್ಚಿಸಲು ಭಾರತೀಯ ಫೇಸ್ ಬುಕ್ ಮುಖ್ಯಸ್ಥ ಅಜಿತ್ ಮೋಹನ್ ರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ತನ್ನದೇ ಆಂತರಿಕ ಭದ್ರತಾ ತಂಡದ ಎಚ್ಚರಿಕೆಯ ಕುರಿತು ಅಜಿತ್ ಮೋಹನ್ ರನ್ನು ಪ್ರಶ್ನಿಸಲಾಯಿತು ಎಂದು hindusthantimes.com ವರದಿ ಮಾಡಿದೆ.
“ಫೇಸ್ ಬುಕ್ ನ ಸತ್ಯಶೋಧನಾ ತಂಡಕ್ಕೆ ಬಜರಂಗದಳವನ್ನುನಿಷೇಧಿಸಲು ಅಥವಾ ಆ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಸಾಕ್ಷ್ಯಾಧಾರಗಳು ದೊರಕಿಲ್ಲ. ಬಜರಂಗದಳದ ವಿರುದ್ಧ ಕ್ರಮ ಕೈಗೊಳ್ಳಲು ಫೇಸ್ ಬುಕ್ ಹಿಂಜರಿಯುತ್ತಿದೆ ಎಂಬ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ನ ವರದಿಯು ಸತ್ಯಕ್ಕೆ ದೂರವಾದದ್ದಾಗಿದೆ” ಎಂದುಅಜಿತ್ ಮೋಹನ್ ಹೇಳಿದ್ದಾಗಿ ವರದಿಯಾಗಿದೆ.
“ವರದಿಯನ್ನು ಉಲ್ಲೇಖಿಸಿದ ಜನರಿಗೆ ಫೇಸ್ ಬುಕ್ ಸಂಸ್ಥೆಯ ನಿರ್ಧಾರವನ್ನು ಪ್ರಶ್ನಿಸಲು ಯಾವುದೇ ಅಧಿಕಾರವಿಲ್ಲ” ಎಂದೂ ಅವರು ಹೇಳಿದರು. ಈ ನಡುವೆ, ‘ವಾಲ್ ಸ್ಟ್ರೀಟ್ ಜರ್ನಲ್’ ಗೆ ತಮ್ಮ ವರದಿಯಲ್ಲಾದ ತಪ್ಪನ್ನುತಿದ್ದಲು ಯಾಕೆ ಹೇಳಲಿಲ್ಲ? ಎಂಬ ಸಂಸದೀಯ ಸಭೆಯ ಪ್ರಶ್ನೆಗೆ ಅಜಿತ್ ಮೋಹನ್ ಉತ್ತರಿಸಲಿಲ್ಲ ಎಂದು scroll.in ತನ್ನ ವರದಿಯಲ್ಲಿ ತಿಳಿಸಿದೆ.