ಮೀನಿಗೆ ರಾಸಾಯನಿಕ ಬಳಕೆ ವಿರುದ್ಧ ಕಾನೂನು ಕ್ರಮ : ಸಚಿವ ಕೋಟ
ಉಡುಪಿ, ಡಿ.17: ಮೀನಿಗೆ ರಾಸಾಯನಿಕ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಹಾಗೂ ಇಲಾಖೆ ಅಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ. ಮೀನಿಗೆ ಯಾವ ರೀತಿ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ತಕ್ಷಣವೇ ಕ್ರಮ ಜರಗಿಸಲಾಗುವುದು ಎಂದು ರಾಜ್ಯ ಮೀನುಗಾರಿಕಾ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೊಹತ್ಯೆ ನಿಷೇಧ ಕಾಯಿದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲು ಸರಕಾರ ನಿರ್ಧರಿಸಿದೆ. ಅದನ್ನು ನಾವು ತಂದೇ ತರುತ್ತೇವೆ. ಈ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದರು.
ಪಂಜರ ಕೃಷಿಯಲ್ಲಿ ವೈರಸ್ ಹಾವಳಿಯಿಂದ ಮೀನುಗಳು ಸತ್ತು ಹೋಗಿವೆ. ಹರಿಯುವ ನೀರು ಆಗಿರುವುದರಿಂದ ಅದನ್ನು ನಿಯಂತ್ರಣ ಮಾಡುವುದು ಕಷ್ಟಸಾಧ್ಯವಾಗಿದೆ. ಮೀನುಗಾರಿಕಾ ಕಾಲೇಜಿನ ತಜ್ಞರು ಮತ್ತು ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿನ ಸಮಸ್ಯೆ ಬಗೆಹರಿಸಿ, ನೊಂದವರಿಗೆ ನೆರವು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಪ್ರತಿ ತಿಂಗಳು ಸಪ್ತಪದಿ ವಿವಾಹ
ಸಪ್ತಪದಿ ಸಾಮೂಹಿಕ ವಿವಾಹ ಯೋಜನೆ ಕೋವಿಡ್ ಕಾರಣಕ್ಕೆ ನಿಲುಗಡೆ ಯಾಗಿತ್ತು. ಇತ್ತೀಚೆಗೆ ಇಡೀ ರಾಜ್ಯದಲ್ಲಿ 23 ಮಂದಿಗೆ ವಿವಾಹ ಮಾಡುವ ಕಾರ್ಯ ನಡೆಸಲಾಗಿದೆ. ಜನವರಿಯಲ್ಲಿ ವಿವಾಹಕ್ಕೆ ಎರಡು ದಿನಾಂಕ ನಿಗದಿ ಪಡಿಸಲಾಗಿದೆ. ಇನ್ನು ವಾರ್ಷಿಕದ ಬದಲು ಪ್ರತಿ ತಿಂಗಳು ಸಪ್ತಪದಿ ಕಾರ್ಯಕ್ರಮ ಮಾಡಲಾಗುವುದು. ಇದರಲ್ಲಿ ಸರಕಾರ ಯಶಸ್ವಿಯಾಗಲಿದೆ ಎಂದು ಸಚಿವರು ತಿಳಿಸಿದರು.
ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕೋಡಿ ಗ್ರಾಪಂಗೆ ಒದಗಿಸ ಲಾಗಿದೆ. ಆದರೂ ಈ ಗ್ರಾಪಂನಲ್ಲಿ ಚುನಾವಣಾ ಬಹಿಷ್ಕಾರ ಮಾಡಲಾಗಿದೆ. ಕೆಲವರಿಗೆ ಚುನಾವಣಾ ಬಹಿಷ್ಕರಿಸುವುದೇ ಫ್ಯಾಶನ್ ಆಗಿದೆ. ಇವರು ಪ್ರತಿ ಗ್ರಾಮ ಸಭೆಗೂ ವಿವಿಧ ಕಾರಣ ಹೇಳಿ ಬಹಿಷ್ಕಾರ ಮಾಡುತ್ತಾರೆ. ಪ್ರಜಾಪ್ರಭುತ್ವ ದಲ್ಲಿ ಚುನಾವಣೆ ಬೇಡ ಎಂದು ಗ್ರಾಮಸ್ಥರೇ ತೀರ್ಮಾನ ತೆಗೆದುಕೊಂಡಿರು ವುದರಿಂದ ಅವರನ್ನು ಒತ್ತಾಯ ಮಾಡಬೇಕಾದ ಅನಿವಾರ್ಯತೆ ನಮಗೆ ಇಲ್ಲ. ಮುಂದೆ ಈ ಕುರಿತು ಚುನಾವಣಾ ಆಯೋಗ ತೆಗೆದುಕೊಳುವ ತೀರ್ಮಾನಕ್ಕೆ ನಾವು ಬದ್ಧರಾಗಿ ದ್ದೇವೆ ಎಂದರು.
ಲವ್ ಜಿಹಾದ್ ನಿಯಂತ್ರಣಕ್ಕೆ ಕಾಯಿದೆ ತರಲು ರಾಜ್ಯ ಸರಕಾರ ಹಾಗೂ ಪಕ್ಷ ಈಗಾಗಲೇ ನಿರ್ಧಾರ ಮಾಡಿದೆ. ಆ ಕಾರ್ಯ ಈಗ ಪ್ರಗತಿಯ ಲ್ಲಿದೆ. ಇದನ್ನು ನಿರ್ಧಿಷ್ಟವಾಗಿ ಸುಗ್ರಿವಾಜ್ಞೆ ಮೂಲಕ ಜಾರಿಗೆ ತರುತ್ತಿಲ್ಲ. ಆ ಕಾಯಿದೆ ತರಬೇಕು ಎಂಬುದು ನಮ್ಮ ಪಕ್ಷ, ಸಾರ್ವಜನಿಕರು ಹಾಗೂ ಧರ್ಮದ ಆಶಯ ವಾಗಿದೆ ಎಂದು ಅವರು ತಿಳಿಸಿದರು.
‘ಸಭಾಪತಿ ಸ್ಥಾನ ಕಾಂಗ್ರೆಸ್ಸಿಕರಣ’
ವಿಧಾನ ಪರಿಷತ್ ಸಭಾಪತಿ ಸ್ಥಾನದ ಬಗ್ಗೆ ಎಲ್ಲರಿಗೂ ಗೌರವ ಇದೆ. ಆದರೆ ಕಾಂಗ್ರೆಸಿನವರು ಅದನ್ನು ಕಾಂಗ್ರೆಸಿಕರಣಗೊಳಿಸಿ ರಾಜಕಾರಣ ಮಾಡಿರುವುದ ರಿಂದ ಇಂದು ಎಲ್ಲ ರೀತಿಯ ಗೊಂದಲಗಳು ಸೃಷ್ಠಿಯಾಗಿವೆ. ಇದಕ್ಕೆ ನೇರವಾಗಿ ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ದೂರಿದರು.
ಕಾಂಗ್ರೆಸ್‌ನವರು ಸಭಾಪತಿ ಮೇಲೆ ಒತ್ತಡ ತಂದು ಈ ಗೊಂದಲಕ್ಕೆ ಉಂಟು ಮಾಡಿದ್ದಾರೆ. ರಾಜಧರ್ಮವನ್ನು ಪಾಲಿಸ ಬೇಕಾದ ಕಾಂಗ್ರೆಸ್, ಸಭಾಪತಿ ಅವರ ಕೈಯನ್ನು ಕಟ್ಟಿ ಹಾಕಿ, ಅವಿಶ್ವನಾಸ ಗೊತ್ತುವಳಿ ಆಗದಂತೆ ನೋಡಿಕೊಂಡಿದೆ ಎಂದ ಅವರು, ಸಭಾಪತಿ ಯಾರು ಆಗಬೇಕು ಎಂಬುದನ್ನು ಬಿಜೆಪಿ ಪಕ್ಷ ತೀರ್ಮಾನ ಮಾಡುತ್ತದೆ. ಜೆಡಿಎಸ್ ಬೆಂಬಲ ನೀಡಿದರೂ ಕೂಡ ಎಲ್ಲವೂ ಪಕ್ಷದ ಅಧ್ಯಕ್ಷರು, ವರಿಷ್ಠರು, ಮುಖ್ಯ ಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.