ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಕುಮಾರ್ ಭಟ್ ಬದಿಕೋಡಿ ರಾಜೀನಾಮೆ
ಬಂಟ್ವಾಳ, ಡಿ.17: ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡ ಕುಮಾರ್ ಭಟ್ ಬದಿಕೋಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಕುಮಾರ್ ಭಟ್, ಕ್ಷೇತ್ರದ ಅಭಿವೃದ್ಧಿಗೆ ಕೆಲವು ವ್ಯಕ್ತಿಗಳಿಂದ ಬಹಳಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.
ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರದ ವ್ಯಕ್ತಿಗಳು ಸೇರಿಕೊಂಡು ಕನ್ಯಾನ ಗ್ರಾಮ ಪಂಚಾಯತ್ ಗೆ ತಾಲೂಕು ಪಂಚಾಯತ್ ಸದಸ್ಯ ಆಗಮಿಸಬಾರದು ಎಂಬ ನಿರ್ಣಯವನ್ನು ಕೈಗೊಂಡಿದ್ದರು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗಬಾರದು ಎಂದು ಯಾವುದೇ ತಡೆಯಾಜ್ಞೆ ತಂದಿರಲಿಲ್ಲ ಎಂದು ತಿಳಿಸಿದರು.
ಬಿಳಿ ಅಂಗಿ ಪ್ಯಾಂಟ್ ಧರಿಸಿರುವ ವ್ಯಕ್ತಿ ಪಕ್ಷದ ನಾಯಕರನ್ನು ಹೊಗಳಿ ರಾಜಕೀಯದ ಸದ್ಯ ಸ್ಥಿತಿಗೆ ಆಗಮಿಸಿದ್ದಾರೆ. ಕಾರ್ಯಕರ್ತರು ಯಾವುದೇ ಕಾರಣಕ್ಕೆ ರಾಜೀನಾಮೆ ಕೊಡಬಾರದು ಎಂಬ ಬೇಡಿಕೆ ಇಟ್ಟಿದ್ದರು. ಆದರೆ ಅಲ್ಲಾದ ಅವಮಾನ ಕಷ್ಟಗಳನ್ನು ಗಮನಿಸಿ ರಾಜೀನಾಮೆ ಸಲ್ಲಿಸಿ, ಯಾರ ಬೆಂಬಲವಿಲ್ಲದೆ ಕನ್ಯಾನ ಗ್ರಾಮ ಪಂಚಾಯಿತಿಗೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದೇನೆ. ಕಾಂಗ್ರೆಸ್ ನ ಮೂಲ ಸಂಸ್ಕೃತಿ ನಾಶವಾಗಿದೆ. ಬಿಜೆಪಿಗೆ ಸೇರ್ಪಡೆಯ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು.