ಮೀನಿಗೆ ಫಾರ್ಮಾಲಿನ್ ರಾಸಾಯನಿಕ ಬಳಕೆ: ಆಧಾರ ರಹಿತ ಸುದ್ದಿ ಹರಡುವವ ವಿರುದ್ಧ ಕ್ರಮಕ್ಕೆ ಡಿಸಿಗೆ ಮನವಿ
ಮಲ್ಪೆ, ಡಿ.17: ಜಿಲ್ಲೆಯಲ್ಲಿ ಮಾರಾಟಗೊಳ್ಳುತ್ತಿರುವ ಮೀನುಗಳಿಗೆ ಫಾರ್ಮಲಿನ್ ಕೆಮಿಕಲ್ ಬಳಸಲಾಗುತ್ತಿದೆ ಎಂಬ ಸುಳ್ಳು ಆಪಾದನೆ ಮಾಡಿ ದೂರು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೀನು ಮಾರಾಟ ಫೆಡರೇಶನ್ ಮತ್ತು ಮಲ್ಪೆ ಮೀನುಗಾರ ಸಂಘ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಆಧಾರ ರಹಿತವಾಗಿ ದೂರು ನೀಡಿ ಮೀನು ಪ್ರಿಯರಲ್ಲಿ ಗೊಂದಲ ಮೂಡಿ ಸುವ ಕಾರ್ಯ ಮಾಡಲಾಗುತ್ತಿದೆ. ಮಲ್ಪೆ ಬಂದರಿನಲ್ಲಿ ಅಥವಾ ಅಧಿಕೃತವಾಗಿ ಮಹಿಳಾ ಮಾರಾಟಗಾರರಿಂದ ಈವರೆಗೆ ಇಂತಹ ಯಾವುದೇ ಸಮಸ್ಯೆ ಉಂಟಾಗಿಲ್ಲ. ಅನಧಿಕೃತ ಸ್ಟಾಲ್‌ಗಳಲ್ಲಿ ಮೀನು ಮಾರಾಟ ಮಾಡುವ ಸ್ಟಾಲ್ ಗಳಲ್ಲಿ ಫಾರ್ಮಲಿನ್ ರಾಸಾಯನಿಕ ಬಳಕೆಯಾಗಿದ್ದರೆ ಆದಕ್ಕೆ ಮೀನುಗಾರರು ಜವಾಬ್ದಾರರಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ರೀತಿ ಆಧಾರರಹಿತವಾಗಿ ಸುಳ್ಳು ಹೇಳಿಕೆಯಿಂದಾಗಿ ಕೋಟ್ಯಾಂತರ ರೂಪಾಯಿ ವ್ಯವಹಾರ ಉದ್ಯಮಕ್ಕೆ ಹೊಡೆತ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಸುಳ್ಳು ಸುದ್ದಿ ಹರಡಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕೆಲವೊಂದು ಅನಧಿಕೃತ ಸ್ಟಾಲ್‌ಗಳಲ್ಲಿ ಮೀನು ಮಾರಾಟ ಮಾಡಲಾಗು ತ್ತಿದ್ದು ಅಲ್ಲಿ ಇಂತಹ ಪ್ರಕರಣಗಳು ನಡೆಯಲು ಸಾಧ್ಯವಿದೆ. ಅಲ್ಲಿ ಸಿಗುವ ಮೀನಿನ ಸುರಕ್ಷತೆ, ತಾಜಾತನ, ಗುಣಮಟ್ಟದ ವಿಷಯದಲ್ಲಿ ಗ್ರಾಹಕರು ಜಾಗರೂಕತೆಯಿಂದ ಅಂತವರಲ್ಲಿ ವ್ಯವಹರಿಸಬೇಕು. ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿರುವ ಮೀನಿನ ಸ್ಟಾಲ್‌ಗಳ ವಿರುದ್ದ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವಿವಿಧ ಮೀನುಗಾರ ಸಂಘಟನೆಯ ಮುಖಂಡರಾದ ಯಶ್‌ಪಾಲ್ ಎ.ಸುವರ್ಣ, ರಮೇಶ್ ಕೋಟ್ಯಾನ್, ಕಿಶೋರ್ ಡಿ.ಸುವರ್ಣ, ಸುಭಾಷ್ ಮೆಂಡನ್, ರಾಮಚಂದ್ರ ಕುಂದರ್, ಜಯ ಸಿ.ಕೋಟ್ಯಾನ್, ದಯಾನಂದ ಸುವರ್ಣ, ರತ್ನಾಕರ ಸಾಲ್ಯಾನ್, ವಿನಯ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.