ಕಾನ್ಸ್‌ಟೇಬಲ್, ಪತ್ನಿ ಹತ್ಯೆ: ಮನೆ ಹೊರಗಡೆ ತಿರುಗಾಡುತ್ತಿದ್ದ ಪುತ್ರಿ ಮೇಲೆ ಶಂಕೆ

Update: 2020-12-17 15:00 GMT

ಇಂದೋರ್, ಡಿ. 17: ಇಲ್ಲಿ ನಿಯೋಜಿಸಲಾಗಿದ್ದ ವಿಶೇಷ ಸಶಸ್ತ್ರ ಸೇನಾ ಪಡೆ (ಎಸ್‌ಎಎಫ್) ಯ ಕಾನ್ಸ್‌ಟೇಬಲ್ ಹಾಗೂ ಅವರ ಪತ್ನಿಯನ್ನು ಗುರುವಾರ ಬೆಳಗ್ಗೆ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಹತ್ಯೆ ಪ್ರಕರಣದ ಶಂಕಿತರಲ್ಲಿ ಪೊಲೀಸ್‌ನ 17ರ ಹರೆಯದ ಪುತ್ರಿ ಹಾಗೂ ಆಕೆಯ ಗೆಳೆಯ ಕೂಡ ಸೇರಿದ್ದು, ಅವರನ್ನು ಪೊಲೀಸರು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಏರೋಡ್ರೋಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ನಿವಾಸದಲ್ಲಿ ಜ್ಯೋತಿ ಪ್ರಸಾದ್ ಶರ್ಮಾ (45) ಹಾಗೂ ಅವರ ಪತ್ನಿ ನೀಲಂ (43) ಅವರ ಮೃತದೇಹ ನೆತ್ತರ ಮಡುವಿನಲ್ಲಿ ಪತ್ತೆಯಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಅವಳಿ ಕೊಲೆಯನ್ನು ಹರಿತವಾದ ಆಯುಧದಿಂದ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಸ್‌ಎಪಿ) ಪ್ರಶಾಂತ್ ಚೌಬೆ ತಿಳಿಸಿದ್ದಾರೆ.

‘‘ಮನೆಯ ಒಳಗಿನಿಂದ ಬೆಳಗ್ಗೆ ಕಿರುಚುವ ಶಬ್ದ ಕೇಳಿದರೂ ಜ್ಯೋತಿ ಪ್ರಸಾದ್ ಶರ್ಮಾ ಅವರ ಅಪ್ರಾಪ್ತ ಪುತ್ರಿ ಮನೆಯ ಹೊರಗೆ ತಿರುಗಾಡುತ್ತಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ’’

 ಅವರ ಮನೆಯ ಸಮೀಪವೇ ಇರುವ ಅಜ್ಜ-ಅಜ್ಜಿ ಹಾಗೂ ನೆರೆಯವರು ಮನೆಯ ಒಳಗಿನಿಂದ ಕಿರುಚುವ ಶಬ್ದ ಕೇಳುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಆಕೆ, ತಂದೆ-ತಾಯಿ ಜಗಳಾಡುತ್ತಿದ್ದಾರೆ ಎಂದು ಹೇಳಿದ್ದಳು.

ಅವಳಿ ಕೊಲೆ ಸಂಭವಿಸಿದ ಬಳಿಕ ಜ್ಯೋತಿ ಪ್ರಸಾದ್ ಅವರ ಅಪ್ರಾಪ್ತ ಪುತ್ರಿ ಹಾಗೂ ಆಕೆಯ ಗೆಳೆಯ ನಾಪತ್ತೆಯಾಗಿದ್ದಾರೆ. ಆದುದರಿಂದ ನಾವು ಅವರು ಈ ಕೊಲೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದೇವೆ. ಅವರಿಬ್ಬರನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News