ಕಾರಿಗೆ ನಕಲಿ ನಂಬರ್ ಪ್ಲೇಟ್: ಪ್ರಕರಣ ದಾಖಲು
Update: 2020-12-17 21:19 IST
ಕಾರ್ಕಳ, ಡಿ.17: ನಕಲಿ ನಂಬರ್ ಪ್ಲೇಟ್ ಆಳವಡಿಸಿ ಕಾರನ್ನು ಉಪಯೋಗಿ ಸುತ್ತಿದ್ದ ವ್ಯಕ್ತಿಯ ವಿರುದ್ದ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.16ರಂದು ಸಂಜೆ ವೇಳೆ ಪೊಲೀಸರು ಮಿಯ್ಯರು ಗ್ರಾಮದ ಜೋಡುಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುವಾಗ ಈ ವಿಚಾರ ಬೆಳಕಿಗೆ ಬಂದಿದೆ. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಶಾಂತ್ ಆಚಾರ್ಯ ಹುಂಡೈ ಐ10 ಕಾರನ್ನು ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದು 2016ರಲ್ಲಿ ಖರೀದಿಸಿದ್ದನು. ಈ ಕಾರಿನ ಸಾಲ ಬ್ಯಾಂಕಿ ನಲ್ಲಿ ಸುಮಾರು ಒಂದು ಲಕ್ಷ ಮೊತ್ತ ಬಾಕಿ ಇದೆ. ಕಾರನ್ನು ಖರೀದಿಸಿದ ನಂತರ ಆತ ನೊಂದಣಿ ನಂಬ್ರವನ್ನು ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಪಡೆಯದೆ ಸರಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ ನಕಲಿ ನಂಬರ್ ಪ್ಲೇಟ್ ಆಳವಡಿಸಿ ಕಾರು ಓಡಿಸುತ್ತಿದ್ದನು ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ.