ಕೆನಡ ಪ್ರಧಾನಿಯ ರೈತಪರ ಹೇಳಿಕೆಯನ್ನು ಖಂಡಿಸಿದ ಭಾರತೀಯ ಮಾಜಿ ರಾಯಭಾರಿಗಳಿಗೆ ತೀವ್ರ ತರಾಟೆ
ಒಟ್ಟಾವ (ಕೆನಡ), ಡಿ. 17: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವುದಕ್ಕಾಗಿ ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊರನ್ನು ಬಹಿರಂಗ ಪತ್ರವೊಂದರಲ್ಲಿ ಖಂಡಿಸಿರುವ ಮಾಜಿ ಭಾರತೀಯ ರಾಯಭಾರಿಗಳಿಗೆ ಭಾರತ-ಕೆನಡಿಯನ್ ಸಂಘಟನೆಗಳ ಗುಂಪೊಂದು ತಿರುಗೇಟು ನೀಡಿದೆ.
ತಮ್ಮನ್ನು ‘ಭಾರತದೊಂದಿಗೆ ಪ್ರಬಲ ನಂಟು ಹೊಂದಿರುವ ಕೆನಡಿಯನ್ನರನ್ನು ಪ್ರತಿನಿಧಿಸುತ್ತಿರುವ ಸಂಘಟನೆಗಳು’ ಎಂಬುದಾಗಿ ಬಣ್ಣಿಸಿರುವ ಈ ಗುಂಪು, ನೂತನ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ರೈತರ ಪರವಾಗಿ ಟ್ರೂಡೊ ನೀಡಿರುವ ‘ಸೌಮ್ಯ ಹೇಳಿಕೆ’ಗೆ ಮಾಜಿ ರಾಜತಾಂತ್ರಿಕರು ನೀಡಿರುವ ‘ಬೆದರಿಕೆಯ ಹಾಗೂ ಪಕ್ಷಪಾತಪೂರಿತ’ ಹೇಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಸೆಂಟರ್ ಫಾರ್ ಸ್ಟಡಿ ಆ್ಯಂಡ್ ರಿಸರ್ಚ್ ಇನ್ ಸೌತ್ ಏಶ್ಯ; ಡೆಮಾಕ್ರಸಿ ಇಕ್ವಾಲಿಟಿ ಆ್ಯಂಡ್ ಸೆಕ್ಯುಲರಿಸಮ್ ಇನ್ ಸೌತ್ ಏಶ್ಯ, ವಿನಿಪೆಗ್; ಇಂಡಿಯನ್ ಸಿವಿಲ್ ವಾಚ್-ಕೆನಡ; ಸೌತ್ ಏಶ್ಯನ್ ನೆಟ್‌ವರ್ಕ್ ಫಾರ್ ಸೆಕ್ಯುಲರಿಸಮ್ ಆ್ಯಂಡ್ ಡೆಮಾಕ್ರಸಿ (ಎಸ್‌ಎಎನ್‌ಎಸ್‌ಎಡಿ); ದ ಪಂಜಾಬ್ ಲಿಟರಸಿ ಆ್ಯಂಡ್ ಕಲ್ಚರಲ್ ಅಸೋಸಿಯೇಶನ್, ವಿನಿಪೆಗ್; ಮತ್ತು ಸೌತ್ ಏಶ್ಯನ್ ದಲಿತ್ ಆದಿವಾಸಿ ನೆಟ್‌ವರ್ಕ್‌ಗಳು ಜಂಟಿ ಹೇಳಿಕೆಯನ್ನು ನೀಡಿವೆ.
ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ಟ್ರೂಡೊ ನವೆಂಬರ್ 30ರಂದು ಹೇಳಿಕೆಯನ್ನು ನೀಡಿದ್ದರು. ‘‘ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕೆನಡ ಯಾವತ್ತೂ ಮುಂಚೂಣಿಯಲ್ಲಿರುತ್ತದೆ’’ ಎಂದು ಅವರು ಹೇಳಿದ್ದರು.
ಟ್ರೂಡೊರ ಮಾತುಗಳು ಬೆಂಕಿಗೆ ತುಪ್ಪ ಹಾಕುವ ಉದ್ದೇಶವನ್ನು ಮಾತ್ರ ಸಾಧಿಸಿವೆ ಎಂಬುದಾಗಿ ಭಾರತದ 22 ಮಾಜಿ ರಾಯಭಾರಿಗಳು ತಮ್ಮ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದರು. ಅದೂ ಅಲ್ಲದೆ, ಟ್ರೂಡೊ ಸರಕಾರ ಮತಬ್ಯಾಂಕ್ ರಾಜಕಾರಣದಲ್ಲಿ ತೊಡಗಿದೆ ಎಂದೂ ಆರೋಪಿಸಿದ್ದರು.
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಭಾರತ-ಕೆನಡಿಯನ್ ಸಂಘಟನೆಗಳು, ‘‘ಪ್ರಧಾನಿ ಟ್ರೂಡೊರ ಹೇಳಿಕೆಯು ಭಾರತೀಯ-ಕೆನಡಿಯನ್ನರ ಬೆಂಬಲವನ್ನು ಗಳಿಸುವ ಉದ್ದೇಶವನ್ನು ಹೊಂದಿರಬಹುದು. ಆದರೆ, ಪ್ರಜಾತಂತ್ರದಲ್ಲಿ ಇದು ಸಾಮಾನ್ಯ’’ ಎಂದು ಹೇಳಿವೆ.