ಮಾದರಿಗಳೊಂದಿಗೆ ಭೂಮಿಗೆ ಮರಳಿದ ಚೀನಾದ ಚಂದ್ರಶೋಧಕ ನೌಕೆ

Update: 2020-12-17 16:24 GMT

ಬೀಜಿಂಗ್, ಡಿ. 17: ಚಂದ್ರನ ಮೇಲ್ಮೈಯಿಂದ ಕಲ್ಲು ಮತ್ತು ಮಣ್ಣಿನ ಮಾದರಿಗಳನ್ನು ಹೊತ್ತಿರುವ ಚೀನಾದ ಮಾನವರಹಿತ ಚಂದ್ರಶೋಧಕ ನೌಕೆ ‘ಚಾಂಗೆ-5’ ಗುರುವಾರ ಮುಂಜಾನೆ ಸುರಕ್ಷಿತವಾಗಿ ಭೂಮಿಗೆ ಮರಳಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದು ನಾಲ್ಕು ದಶಕಗಳಲ್ಲೇ ಚಂದ್ರನಿಂದ ಭೂಮಿಗೆ ಮಾದರಿಗಳನ್ನು ತಂದ ಮೊದಲ ನೌಕೆಯಾಗಿದೆ.

ಮಾದರಿಗಳನ್ನು ಹೊತ್ತ ಕ್ಯಾಪ್ಸೂಲ್ ಉತ್ತರ ಚೀನಾದ ಇನ್ನರ್ ಮಂಗೋಲಿಯ ವಲಯದಲ್ಲಿ ಭೂಸ್ಪರ್ಶ ಮಾಡಿತು ಎಂದು ಚೀನಾ ನ್ಯಾಶನಲ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ ಮೂಲಗಳನ್ನು ಉಲ್ಲೇಖಿಸಿ ಕ್ಸಿನುವಾ ವರದಿ ಮಾಡಿದೆ. ಇದರೊಂದಿಗೆ, ಚಂದ್ರನಿಂದ ಮಾದರಿಗಳನ್ನು ತಂದ ಮೂರನೇ ದೇಶವಾಗಿ ಚೀನಾ ಹೊರಹೊಮ್ಮಿದೆ. 1960 ಮತ್ತು 1970ರ ದಶಕಗಳಲ್ಲಿ ಅಮೆರಿಕ ಮತ್ತು ರಶ್ಯಗಳು ಈ ಸಾಧನೆಯನ್ನು ಮಾಡಿವೆ.

ಅಮೆರಿಕ ಮತ್ತು ರಶ್ಯಗಳ ಸಾಧನೆಗಳನ್ನು ಸರಿಗಟ್ಟಲು ಸಂಕಲ್ಪ ಮಾಡಿರುವ ಚೀನಾವು, ಸೇನೆಯಿಂದ ನಡೆಸಲ್ಪಡುವ ತನ್ನ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಬಿಲಿಯಗಟ್ಟಳೆ ಡಾಲರ್‌ಗಳನ್ನು ಸುರಿದಿದೆ. ಚೀನಾದ ಚಂದ್ರ ದೇವತೆಯ ಹೆಸರನ್ನು ಹೊಂದಿರುವ ಚಂದ್ರಶೋಧಕ ನೌಕೆ ಚಾಂಗೆ-5 ನವೆಂಬರ್ 23ರಂದು ಭೂಮಿಯಿಂದ ಉಡಾವಣೆಗೊಂಡಿತ್ತು ಹಾಗೂ ಡಿಸೆಂಬರ್ 1ರಂದು ಚಂದ್ರನ ಮೇಲೆ ಇಳಿದಿತ್ತು. ಅದು ಚಂದ್ರನ ಮೇಲೆ ಚೀನಾದ ಧ್ವಜವನ್ನು ಹಾರಿಸಿದೆ ಎಂದು ದೇಶದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಅದು ಸುಮಾರು 2 ಕಿಲೋಗ್ರಾಮ್‌ನಷ್ಟು ಮಾದರಿಗಳನ್ನು ಚಂದ್ರನಿಂದ ತರಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News