ಉಜಿರೆ: ಉದ್ಯಮಿಯ ಎಂಟು ವರ್ಷದ ಪುತ್ರನ ಅಪಹರಣ
ಬೆಳ್ತಂಗಡಿ, ಡಿ.18: ಉಜಿರೆಯ ಉದ್ಯಮಿಯೊಬ್ಬರ ಪುತ್ರನನ್ನು ತಂಡವೊಂದು ಅಪಹರಿಸಿ ಕೋಟ್ಯಂತರ ಹಣದ ಬೇಡಿಕೆ ಇರಿಸಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಯ ಅಶ್ವತ್ಥಕಟ್ಟೆ ಸಮೀಪದ ನಿವಾಸಿ ಉದ್ಯಮಿ ಬಿಜೋಯ್ ಏಜೆನ್ಸಿಸ್ ಮಾಲಕ ಬಿಜೋಯ್ ಅವರ ಪುತ್ರ ಅನುಭವ್ (8) ಅಪಹರಣಕ್ಕೀಡಾದ ಬಾಲಕ. ಈತನನ್ನು ಡಿ.17ರಂದು ಸಂಜೆ ಬಿಳಿ ಕಾರಿನಲ್ಲಿ ಮನೆಯ ಗೇಟ್ ಬಳಿಯಿಂದ 3ರಿಂದ 4 ಮಂದಿಯಿದ್ದ ತಂಡ ಅಪಹರಿಸಿದ್ದು, 17 ಕೋಟಿ ರೂ. ನೀಡುವಂತೆ ಬೇಡಿಕೆ ಇರಿಸಿದೆ ಎಂದು ಬಾಲಕನ ಅಜ್ಜ ಎ.ಕೆ. ಶಿವನ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಶಿವನ್ ಸಂಜೆ ವಾಕಿಂಗ್ ಹೋಗಿದ್ದು, ಮೊಮ್ಮಗ ಅನುಭವ್ ಆಟವಾಡಿ ಅಜ್ಜನ ಎದುರಿನಿಂದ ಮನೆ ಕಡೆಗೆ ತೆರಳುತ್ತಿದ್ದನೆನ್ನಲಾಗಿದೆ. ಮನೆಯ ಗೇಟು ಬಳಿ ತಲುಪುತ್ತಿದ್ದಂತೆ ಅಲ್ಲಿಯೆ ನಿಂತಿದ್ದ ಬಿಳಿ ಬಣ್ಣದ ಕಾರಿನಿಂದ ಇಬ್ಬರು ಅಪರಿಚಿತರು ಇಳಿದು ಅನುಭವ್ ನನ್ನು ಬಲವಂತದಿಂದ ಕಾರಿನಲ್ಲಿ ಕುಳ್ಳಿರಿಸಿದ್ದಾರೆ. ಶಿವನ್ ಓಡಿ ಕಾರಿನ ಬಳಿಗೆ ತಲುಪುವ ವೇಳೆಗೆ ಕಾರನ್ನು ಚಲಾಯಿಸಿಕೊಂಡು ರಥ ಬೀದಿ ಕಡೆಗೆ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಅಪಹರಣಕಾರರು ಶಿವನ್ ಅವರ ಸೊಸೆಗೆ ಪೋನ್ ಮಾಡಿ ಮಗನನ್ನು ಬಿಡಿಸಲು ಭಾರೀ ಮೊತ್ತದ ಬೇಡಿಕೆ ಇಟ್ಟಿರುವುದಾಗಿ ಶಿವನ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾತ್ರಿಯಿಡೀ ನಡೆದ ಹುಡುಕಾಟ: ಸಿಗದ ಮಾಹಿತಿ
ಬಾಲಕನ ಅಪಹರಣದ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಪೊಲೀಸರು ಕೂಡಲೇ ಎಲ್ಲ ಮಾಹಿತಿಗಳನ್ನೂ ಕಲೆಹಾಕಿ ಹುಡುಕಾಟ ಆರಂಭಿಸಿದ್ದಾರೆ. ಹಿರಿಯ ಪೋಲೀಸ್ ಅಧಿಕಾರಿಗಳು ಬೆಳ್ತಂಗಡಿಗೆ ಭೇಟಿ ನೀಡಿದ್ದು ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಪೊಲೀಸರು ರಾತ್ರಿಯಿಡೀ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭಿಸಿಲ್ಲ ಎಂದು ತಿಳಿದುಬಂದಿದೆ.
ಅಪಹರಣಕಾರರು ಭಾರೀ ದೊಡ್ಡ ಮೊತ್ತದ ಬೇಡಿಕೆಯಿಟ್ಟಿದ್ದಾರೆ ಎಂಬ ಮಾಹಿತಿಗಳು ಹೊರಬರುತ್ತಿದ್ದು, ಅಪಹರಣ ಪ್ರಕರಣ ಉಜಿರೆಯ ನಾಗರಿಕರಲ್ಲಿ ಭಯ ಮೂಡಿಸಿದೆ.