ನಾಳೆ ಕಾಂಗ್ರೆಸ್ ಮಹತ್ವದ ಕಾರ್ಯತಂತ್ರ ಸಭೆ; ಭಿನ್ನರಿಗೂ ಆಹ್ವಾನ
ಹೊಸದಿಲ್ಲಿ, ಡಿ.18: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ(ಡಿ.19) ಪಕ್ಷದ ಹಿರಿಯ ಮುಖಂಡರ ಸಭೆ ಕರೆದಿದ್ದಾರೆ. ಇದಕ್ಕೆ 23 ಮಂದಿ ಭಿನ್ನಮತೀಯರ ಗುಂಪಿನ ಕೆಲ ಮುಖಂಡರನ್ನೂ ಆಹ್ವಾನಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಪಕ್ಷದ ಕಾರ್ಯತಂತ್ರ ಸಿದ್ಧಪಡಿಸುವುದು, ರೈತ ಚಳವಳಿ, ಚಳಿಗಾಲದ ಅಧಿವೇಶನ ರದ್ದುಪಡಿಸಿರುವುದು ಮತ್ತಿತರ ವಿಷಯಗಳ ಬಗ್ಗೆ ಹಿರಿಯ ಚರ್ಚೆ ನಡೆಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.
ಕೋವಿಡ್-19 ಸಾಂಕ್ರಾಮಿಕ ಆರಂಭವಾದ ಬಳಿಕ ಪಕ್ಷದ ಅಧ್ಯಕ್ಷೆ ಮತ್ತು ಹಿರಿಯ ಮುಖಂಡರ ಸಭೆ ಇದೇ ಮೊದಲ ಬಾರಿಗೆ ನಡೆಯುತ್ತಿದ್ದು, ರವಿವಾರವೂ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಭಿನ್ನಮತೀಯರ ಪೈಕಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಝಾದ್, ಉಪ ಮುಖಂಡ ಆನಂದ್ ಶರ್ಮಾ ಮತ್ತು ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡಾ ಅವರನ್ನು ಸೋನಿಯಾ ಗಾಂಧಿಯವರ ನಿವಾಸದಲ್ಲಿ ನಡೆಯುವ ಸಭೆಗೆ ಆಹ್ವಾನಿಸಾಗಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಈ ಹಿಂದೆ ಪಕ್ಷದ ಎಲ್ಲ ಸಭೆಗಳೂ ವರ್ಚುವಲ್ ವಿಧಾನದಲ್ಲಿ ನಡೆದಿದ್ದವು.
ಕಳೆದ ವಾರ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದಲ್ಲದೇ, ಕೆಲ ಭಿನ್ನಮತೀಯ ಮುಖಂಡರ ಜತೆಗೂ ಮಾತುಕತೆ ನಡೆಸಿದ್ದ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್‌ನಾಥ್ ಅವರ ಒತ್ತಾಯದ ಮೇರೆಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನೂ ಸಭೆಗೆ ಆಹ್ವಾನಿಸಲಾಗಿದೆ.
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಚರ್ಚಿಸಲು ಸೋನಿಯಾ ಗಾಂಧಿಯವರ ಬಳಿ ಸಮಯ ಕೇಳಿದ್ದ ಶಶಿ ತರೂರ್ ಅವರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ.