ಪೈಲಟ್ ಪ್ರಾಜೆಕ್ಟ್ ಗೆ ಉಡುಪಿಯ 5 ಗ್ರಾಪಂಗಳು ಆಯ್ಕೆ

Update: 2020-12-18 05:32 GMT

ಆರ್‌ಬಿಐಯ ಆಫ್‌ಲೈನ್ ಡಿಜಿಟಲ್ ಪಾವತಿ ಯೋಜನೆ

ಉಡುಪಿ, ಡಿ.18: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬಹುನಿರೀಕ್ಷಿತ ಫೀಚರ್ ಫೋನ್ ಬಳಸಿ ಇಂಟರ್‌ನೆಟ್ ರಹಿತವಾಗಿ ಡಿಜಿಟಲ್ ಪೇಮೆಂಟ್ ಮಾಡುವ ಪೈಲಟ್ ಯೋಜನೆಯ ಜಾರಿಗೆ ಇಡೀ ದೇಶದಲ್ಲಿಯೇ ಪ್ರಥಮ ಎಂಬಂತೆ ಉಡುಪಿ ಜಿಲ್ಲೆಯ ಐದು ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ.

ಗ್ಲೋಬಲ್ ಕಾರ್ಡ್ ನೆಟ್‌ವರ್ಕ್ ‘ವೀಸಾ’, ಖಾಸಗಿ ಬ್ಯಾಂಕ್ ‘ಯೆಸ್ ಬ್ಯಾಂಕ್’, ಡಿಜಿಟಲ್ ವ್ಯಾಲೇಟ್ ವೆಂಚರ್ ‘ಯುವ ಪೇ’ ಇವುಗಳ ಸಹಭಾಗಿತ್ವದಲ್ಲಿ ಜಿಲ್ಲೆಯ ಕಾಡೂರು, ಹಾವಂಜೆ, ಕುಕ್ಕೆಹಳ್ಳಿ, ಚೇರ್ಕಾಡಿ, ಇನ್ನಂಜೆ ಗ್ರಾಪಂಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ. ಅದರಂತೆ ಈ ಗ್ರಾಪಂಗಳ ಮನೆಮನೆಗಳಿಗೆ ಯುವ ಪೇ ಪ್ರೀಪೈಯ್ಡಾ ಕಾರ್ಡ್‌ಗಳನ್ನು ವಿತರಿಸಿ ಆ ಮೂಲಕ ಇ-ವ್ಯವಹಾರಗಳನ್ನು ನಡೆಸಲಾಗುತ್ತದೆ. ಇದು ಆರ್‌ಬಿಐಯ ಪ್ಯಾನ್ ಇಂಡಿಯಾ ಯೋಜನೆಯ ಭಾಗವಾಗಿದೆ. ಇಂಟರ್‌ನೆಟ್ ಸಂಪರ್ಕ ಇಲ್ಲದ ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ರಹಿತ ವಾಗಿ ಇ ವ್ಯವಹಾರ ಮಾಡುವ ನಿಟ್ಟಿನಲ್ಲಿ ಆರ್‌ಬಿಐ ಒಂದು ವರ್ಷಗಳ ಹಿಂದೆ ಸುತ್ತೋಲೆ ಹೊರಡಿಸಿತ್ತು. ಅದಕ್ಕಾಗಿ ಪ್ರತ್ಯೇಕ 200-300ಕೋಟಿ ರೂ. ನಿಧಿ ಕೂಡ ಇರಿಸಲಾಗಿತ್ತು. ಇದೀಗ ಅದರಂತೆ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಏನಿದು ಪ್ರೀಪೈಯ್ಡಿ ಕಾರ್ಡ್?

ಪೈಲಟ್ ಆಗಿ ಆಯ್ಕೆ ಮಾಡಿರುವ ಪ್ರತಿ ಗ್ರಾಪಂನ 500 ಮನೆಗಳಂತೆ ಒಟ್ಟು ಐದು ಗ್ರಾಪಂಗಳ 2,500 ಮನೆಗಳಿಗೆ ಯುವ ಪೇ ಪ್ರೀಪೈಯ್ಡಾ ಕಾರ್ಡ್ ವಿತರಿಸುವ ಗುರಿಯನ್ನು ಹೊಂದಲಾಗಿದೆ. ಫೀಚರ್ ಫೋನ್‌ನಿಂದ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಇಂಟರ್ಯಾಕ್ಟಿವ್ ವಾಯ್ಸಿ ರೆಸ್ಪಾನ್ಸ್ ಸಿಸ್ಟಮ್(ಐವಿಆರ್‌ಎಸ್)ನಲ್ಲಿ ಯಾವುದೇ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಓಟಿಪಿ ಆಧಾರಿತವಾಗಿ ಮೊಬೈಲ್ ಬ್ಯಾಂಕಿಂಗ್ ಅಥವಾ ಇಂಟರ್‌ನೆಟ್ ಇಲ್ಲದೆಯೇ ಈ ಪ್ರೀಪೈಯ್ಡಾ ಕಾರ್ಡ್‌ಗೆ ವರ್ಗಾಯಿಸಿಕೊಳ್ಳಬಹುದು. ಒಮ್ಮೆಗೆ 2,000ರೂ. ಹಣ ಮಾತ್ರ ವರ್ಗಾಯಿಸಲು ಅವಕಾಶ ಇರುತ್ತದೆ. ಹೀಗೆ ಒಂದು ಲಕ್ಷ ರೂ.ವರೆಗೆ ಹಣವನ್ನು ಈ ಕಾರ್ಡ್‌ನಲ್ಲಿ ಶೇಖರಿಸಿ ಇಟ್ಟುಕೊಳ್ಳಬಹುದು.

ಮುಂದೆ ಈ ಕಾರ್ಡ್‌ನ್ನು ಎಟಿಎಂ(ಯು ಪೇ ನೀಡಿರುವ ಪಿನ್ ನಂಬರ್ ಬಳಸಿ)ನಲ್ಲಿ, ಪೆಟ್ರೋಲ್ ಬಂಕ್, ಅಂಗಡಿ ಮಾಲ್‌ಗಳಲ್ಲಿ, ಬಿಲ್ ಪಾವತಿ ಗಾಗಿಯೂ ಬಳಸಿಕೊಳ್ಳಬಹುದು. 5,000ರೂ.ವರೆಗಿನ ಪಾವತಿಗೆ ಯಾವುದೇ ಪಿನ್ ನಂಬರಿನ ಅಗತ್ಯ ಇರುವುದಿಲ್ಲ. ಒಮ್ಮೆಗೆ ಒಂದು ಲಕ್ಷ ರೂ.ವರೆಗೆ ಪಾವತಿ ಮಾಡಬಹುದು. ಕಾರ್ಡ್ ಕಳೆದು ಹೋದರೆ ಬ್ಲಾಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ಯು ಪೇ ಆ್ಯಪ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ನಾಕ್.

ಜನವರಿಯಿಂದ ಯೋಜನೆ ಆರಂಭ

ಮುಂದಿನ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಈ ಯೋಜನೆ ಯನ್ನು ಈ ಐದು ಗ್ರಾಪಂಗಳಲ್ಲಿ ಕಾರ್ಯಕರ್ತಗೊಳಿಸಿ, ಅದರ ಸಾಧಕ ಭಾದಕಗಳನ್ನು ಪರೀಕ್ಷಿಸಲಾಗುತ್ತದೆ. ನಂತರ ಅದರ ವರದಿಯನ್ನು ಈ ಸಂಸ್ಥೆಗಳು ಆರ್‌ಬಿಐಗೆ ಸಲ್ಲಿಸಲಿವೆ. ಅದರಂತೆ ಆರ್‌ಬಿಐ ಇದರ ಫಲಿತಾಂಶವನ್ನು ಅಧ್ಯಯನ ಮಾಡಲಿದೆ. ಮುಂದೆ ದೇಶಾದ್ಯಂತ ಈ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಆರ್‌ಬಿಐ ನಿರ್ಧಾರ ತೆಗೆದುಕೊಳ್ಳಲಿದೆ.

ಡಿಸೆಂಬರ್ ಕೊನೆಯ ವಾರದಿಂದ ಈ ಬಗ್ಗೆ ಆಯ್ಕೆ ಮಾಡಲಾದ ಐದು ಗ್ರಾಪಂಗಳಲ್ಲಿ ಅಭಿಯಾನ ಮಾಡಲಾಗುವುದು. ಯುವ ಪೇನಲ್ಲಿ ಹೆಸರು ನೋಂದಾಣಿ ಮಾಡಿದವರಿಗೆ ಪ್ರೀಪೈಯ್ಡಾ ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ. ನಂತರ ಯಾವುದೇ ಪಾವತಿಗೆ ಶುಲ್ಕ ಕಡಿತ ಮಾಡಲಾಗುವುದಿಲ್ಲ. ಎಲ್ಲವೂ ಉಚಿತವಾಗಿರುತ್ತದೆ. ಅದೇ ರೀತಿ ಈ ಕಾರ್ಡ್ ಹೆಚ್ಚು ಸುರಕ್ಷಿತವಾಗಿದೆ. ಇದರಲ್ಲಿ ಸೀಮಿತ ಹಣ ಮಾತ್ರ ಇರುವುದರಿಂದ ಹೆಚ್ಚು ಆತಂಕ ಪಡ ಬೇಕಾಗಿಯೂ ಇರುವುದಿಲ್ಲ.

► ಪ್ರಶಾಂತ್ ನಾಕ್, ವ್ಯವಸ್ಥಾಪಕ ನಿರ್ದೇಶಕರು, ಯು ಪೇ ಆ್ಯಪ್

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News