×
Ad

ಅರ್ನಬ್ ಸಲ್ಲಿಸಿದ್ದ ಕನಿಷ್ಠ ಆರು ಅಪೀಲುಗಳನ್ನು ಆದ್ಯತೆ ಮೇಲೆ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಸುಪ್ರೀಂ: ವರದಿ

Update: 2020-12-18 11:16 IST

ಹೊಸದಿಲ್ಲಿ : ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಸಲ್ಲಿಸಿದ್ದ ಕನಿಷ್ಠ ಆರು ಅಪೀಲುಗಳನ್ನು ಸುಪ್ರೀಂ ಕೋರ್ಟ್ ಆದ್ಯತೆಯ ಮೇಲೆ ವಿಚಾರಣೆಗೆ ಕೈಗೆತ್ತಿಕೊಂಡಿದೆ ಎಂದು thewire.in ವರದಿ ಮಾಡಿದೆ. ಅರ್ನಬ್ ಅವರ ಅಪೀಲುಗಳಲ್ಲಿ ಹೆಚ್ಚಿನವುಗಳನ್ನು ಆದಷ್ಟು ಬೇಗ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ವಿಲೇವಾರಿಗೊಳಿಸಿದೆ. ಕೆಲವು ಅಪೀಲುಗಳನ್ನು ಒಂದು ವಾರದೊಳಗೆ ಹಾಗೂ ಇನ್ನು ಕೆಲವನ್ನು ಮರುದಿನವೇ ವಿಚಾರಣೆಗೆ ಕೈಗೆತ್ತಿಕೊಂಡಿತ್ತು ಎಂದು ವರದಿ ತಿಳಿಸಿದೆ.

ತಮ್ಮ ವಾಹಿನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕುರಿತು ಅರ್ನಬ್ ನೀಡಿದ ಹೇಳಿಕೆಗಳ ವಿರುದ್ಧ ಅವರ ಮೇಲೆ ಹೂಡಲಾಗಿದ್ದ ಹಲವು ಎಫ್‍ಐಆರ್‍ಗಳನ್ನು  ಪ್ರಶ್ನಿಸಿ ಅರ್ನಬ್ ಎಪ್ರಿಲ್ 23,2020ರಂದು ಸಲ್ಲಿಸಿದ ಅಪೀಲನ್ನು ನ್ಯಾಯಾಲಯ ಮರುದಿನವೇ ವಿಚಾರಣೆ ನಡೆಸಿ ವಿಲೇವಾರಿಗೊಳಿಸಿತ್ತಲ್ಲದೆ ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠ ಅರ್ನಬ್‍ಗೆ ಮೂರು ವಾರಗಳ ಕಾಲ ಬಂಧನದಿಂದ ರಕ್ಷಣೆಯೊದಗಿಸಿತ್ತು.

ಇನ್ನೊಂದು ಪ್ರಕರಣದಲ್ಲಿ ಟಿ ಆರ್ ಪಿ ಹಗರಣ ಕುರಿತಂತೆ ರಿಪಬ್ಲಿಕ್ ಟಿವಿಯನ್ನು ನಿರ್ವಹಿಸುವ ಎಆರ್‍ಜಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಅರ್ನಬ್ ಗೋಸ್ವಾಮಿ ಅಕ್ಟೋಬರ್ 10, 2020ರಂದು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರೆ ವಿಚಾರಣೆಯನ್ನು ಅಕ್ಟೋಬರ್ 15ರಂದು ನಡೆಸಲಾಗಿತ್ತು.

ಡಿಸೆಂಬರ್ 17, 2020ರಂದು ಸುಪ್ರೀಂ ಕೋರ್ಟ್ ಎಆರ್‍ಜಿ ಔಟ್ಲಿಯರ್ ಸಂಸ್ಥೆ ನವೆಂಬರ್ 6ರಂದು ಸಲ್ಲಿಸಿದ್ದ ಅಪೀಲನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು.  ತನ್ನ ಸಂಪಾದಕರು ಹಾಗೂ ವರದಿಗಾರರ ವಿರುದ್ಧ ಮುಂಬೈ ಪೊಲೀಸರು  ಸಲ್ಲಿಸಿದ್ದ ಎಫ್‍ಐಆರ್ ವಿರುದ್ಧ  ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತ್ತು, ಸಿಜೆಐ ಬೊಬ್ಡೆ ನೇತೃತ್ವದ ಪೀಠ ಅಪೀಲುದಾರರಿಗೆ ಬಾಂಬೆ ಹೈಕೋರ್ಟಿಗೆ ಮನವಿ ಸಲ್ಲಿಸುವಂತೆ ಸೂಚಿಸಿತ್ತು.

2018ರ ಆರ್ಕಿಟೆಕ್ಟ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಕುರಿತು ಗೋಸ್ವಾಮಿ ವಿರುದ್ಧ ಸಲ್ಲಿಸಲಾದ ಎಫ್‍ಐಆರ್ ಪ್ರಶ್ನಿಸಿ ಸಲ್ಲಿಸಲಾದ ಅಪೀಲನ್ನು ಒಂದು ತಿಂಗಳೊಳಗೆ ಸುಪ್ರೀಂ ಕೋರ್ಟ್ ವಿಲೇವಾರಿಗೊಳಿಸಿತ್ತು.

ಅರ್ನಬ್ ಅವರ ಪ್ರಕರಣಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳುವ ಸುಪ್ರೀಂ ಕೋರ್ಟ್ ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ಸಹಿತ ಕಳೆದ ಹಲವಾರು ಸಮಯದಿಂದ ಬಂಧನದಲ್ಲಿರುವ ಸಾಮಾಜಿಕ ಹೋರಾಟಗಾರರ ಪ್ರಕರಣಗಳನ್ನು ಅಷ್ಟೇ  ಆದ್ಯತೆಯ ಮೇಲೆ ಏಕೆ ಕೈಗೆತ್ತಿಕೊಳ್ಳುತ್ತಿಲ್ಲ ಎಂಬುದಂತೂ ಪ್ರಶ್ನೆಯಾಗಿಯೇ ಉಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News