×
Ad

ರಕ್ಷಣಾ ಪಡೆಗಳ ಸಿಬ್ಬಂದಿಯ ಒಂದು ದಿನದ ವೇತನದಿಂದ ಪಿಎಂ-ಕೇರ್ಸ್ ನಿಧಿಗೆ ರೂ. 203.67 ಕೋಟಿ ದೇಣಿಗೆ

Update: 2020-12-18 11:37 IST

ಹೊಸದಿಲ್ಲಿ,ಡಿ.19: ಪಿಎಂ ಕೇರ್ಸ್‌ ಫಂಡ್‌ಗೆ ಭೂಸೇನೆ,ನೌಕಾಪಡೆ ಹಾಗೂ ವಾಯುಪಡೆಗಳ ಯೋಧರು ತಮ್ಮ ವೇತನಗಳಿಂದ ಒಟ್ಟು 203.67 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆರ್‌ಟಿಐ ಕಾಯ್ದೆಯಡಿ ಲಭ್ಯವಾದ ದಾಖಲೆಗಳನ್ನು ಉಲ್ಲೇಖಿಸಿ ಅದು ಈ ವರದಿಯನ್ನು ಪ್ರಕಟಿಸಿದೆ.

ಭಾರತೀಯ ವಾಯುಪಡೆಯ ಸಿಬ್ಬಂದಿ ಎಪ್ರಿಲ್-ಅಕ್ಟೋಬರ್ ನಡುವೆ ಒಟ್ಟು 29.18 ಕೋಟಿ ರೂ.ಗಳನ್ನು ಪಿಎಂ ಕೇರ್ಸ್‌ಗೆ ದೇಣಿಗೆಯಾಗಿ ನೀಡಿದೆ. ಭಾರತೀಯ ನೌಕಾಪಡೆಯು ಎಪ್ರಿಲ್-ಅಕ್ಟೋಬರ್ ಮಧ್ಯೆ 16.77 ಕೋಟಿ ರೂ. ದೇಣಿಗೆಯಾಗಿ ನೀಡಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಆರ್‌ಟಿಐ ಅರ್ಜಿಗೆ ಭಾರತೀಯ ಭೂಸೇನೆಯು ಯಾವುದೇ ಉತ್ತರವನ್ನು ನೀಡಿಲ್ಲ. ಆದಾಗ್ಯೂ ಮೇ 15ರಂದು ಹೆಚ್ಚುವರಿ ಸಾರ್ವಜನಿಕ ಮಾಹಿತಿ ಮಹಾನಿರ್ದೇಶನಾಲಯವು ಪೋಸ್ಟ್ ಮಾಡಿದ್ದ ಟ್ವೀಟ್‌ನಲ್ಲಿ ಭಾರತೀಯ ಭೂಸೇನಾ ಸಿಬ್ಬಂದಿ ಪಿಎಂ ಕೇರ್ಸ್‌ಗೆ ಏಪ್ರಿಲ್‌ನಲ್ಲಿ ಸ್ವಯಂಪ್ರೇರಿತವಾಗಿ 151.70 ಕೋಟಿ ರೂ. ದೇಣಿಗೆ ನೀಡಿರುವುದಾಗಿ ತಿಳಿಸಿತ್ತು.

 ಮಾರ್ಚ್ 29ರಂದು ರಕ್ಷಣಾ ಸಚಿವಾಲಯವು ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ತನ್ನ ಸಚಿವಾಲಯದ ಸಿಬ್ಬಂದಿಯ ಒಂದು ದಿನದ ವೇತನವನ್ನು ಪಿಎಂಕೇರ್ಸ್‌ ನಿಧಿಗೆ ನೀಡುವ ಪ್ರಸ್ತಾವಕ್ಕೆ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆಂದು ತಿಳಿಸಿದೆ.

 ಭೂಸೇನೆ, ನೌಕಾಪಡೆ, ವಾಯುಪಡೆ,ಸಾರ್ವಜನಿಕ ರಕ್ಷಣೋದ್ಯಮ ಘಟಕಗಳ ಸಿಬ್ಬಂದಿ ಮತ್ತಿತರರು ಸೇರಿದಂತೆ ರಕ್ಷಣಾ ಸಚಿವಾಲಯದ ವಿವಿಧ ವಿಭಾಗಗಳಿಂದ ಒಟ್ಟಾರೆ 500 ಕೋಟಿ ರೂ. ಪಿಎಂ ಕೇರ್ಸ್‌ಗೆ ದೇಣಿಗೆಯಾಗಿ ನೀಡಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ದೇಶದಲ್ಲಿ ಉದ್ಭವಿಸುವ ಯಾವುದೇ ರೀತಿಯ ವಿಕೋಪ ಅಥವಾ ತುರ್ತು ಸನ್ನಿವೇಶಗಳ ನಿರ್ವಹಣೆಗೆ ಸಾರ್ವಜನಿಕರಿಂದ, ಸಂಘಸಂಸ್ಥೆಗಳಿಂದ ದೇಣಿಗೆ, ನೆರವನ್ನು ಸಂಗ್ರಹಿಲು ಪಿಎಂ ಕೇರ್ಸ್‌ ನಿಧಿಯನ್ನು ಸ್ಥಾಪಿಸಲಾಗಿದ್ದು, ಪ್ರಧಾನಿ ಮೋದಿ ಅದರ ಅಧ್ಯಕ್ಷರಾಗಿದ್ದಾರೆ ಹಾಗೂ ಸಂಪುಟದ ಹಿರಿಯ ಸದಸ್ಯರು ಟ್ರಸ್ಟಿಗಳಾಗಿದ್ದಾರೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ ಅರ್ಥಿಕ ಸಂಕಷ್ಟಕ್ಕೀಡಾದ ಜನತೆಗೆ ಪರಿಹಾರವನ್ನು ಒದಗಿಸುವುದಕ್ಕಾಗಿ ಮಾರ್ಚ್ 27ರಂದು ಪಿಎಂ ಕೇರ್ಸ್‌ ನಿಧಿಯನ್ನು ಸಾಪಿಸಲಾಗಿತ್ತು.

ರಾಷ್ಟ್ರೀಕೃತ ಬ್ಯಾಂಕುಗಳು, ಹಣಕಾಸುಸಂಸ್ಥೆಗಳಿಂದ 204.75 ಕೋಟಿ ರೂ. ದೇಣಿಗೆ

  ಸೆಪ್ಟೆಂಬರ್ 28ರಂದು 15 ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳ ಉದ್ಯೋಗಿಗಳಿಂದ ಒಟ್ಟು 204.75 ಕೋಟಿ ರೂ.ದೇಣಿಗೆಯನ್ನು ಪಿಎಂ ಕೇರ್ಸ್‌ ಫಂಡ್ ಸ್ವೀಕರಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಹಲವಾರು ಶಿಕ್ಷಣ ಸಂಸ್ಥೆಗಳು, ನವೋದಯ ವಿದ್ಯಾಲಯಗಳು, ಐಐಟಿ ಹಾಗೂ ಕೇಂದ್ರೀಯ ವಿವಿಗಳು ಕೂಡಾ 21.81 ಕೋಟಿ ರೂ.ಗಳನ್ನು ನಿಧಿಗೆ ದೇಣಿಗೆಯಾಗಿ ನೀಡಿದ್ದವು. ಈ ದೇಣಿಗೆಗಳ ಹೆಚ್ಚಿನ ಹಣವು ಅವುಗಳ ಸಿಬ್ಬಂದಿ ವೇತನದಿಂದ ಪಡೆದವಾಗಿದ್ದವು ಎಂದು ಆರ್‌ಟಿಐ ಮಾಹಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News