ಕಾಮೆಡಿಯನ್ ಕುನಾಲ್ ಕಾಮ್ರಾ, ಕಾರ್ಟೂನಿಸ್ಟ್ ರಚಿತಾ ತನೇಜಾಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ ಸುಪ್ರೀಂ
ಹೊಸದಿಲ್ಲಿ,ಡಿ.18: ಕಾಮೆಡಿಯನ್ ಕುನಾಲ್ ಕಾಮ್ರಾ ಹಾಗೂ ಕಾರ್ಟೂನಿಸ್ಟ್ ರಚಿತಾ ತನೇಜಾ ವಿರುದ್ಧ ಸುಪ್ರೀಮ್ ಕೋರ್ಟ್ ನ್ಯಾಯಾಂಗ ನೋಟಿಸ್ ನೀಡಿದ್ದು, 6 ವಾರಗಳ ಒಳಗಾಗಿ ಸುಪ್ರೀಮ್ ಕೋರ್ಟ್ ವಿರುದ್ಧ ಮಾಡಿರುವ ಟೀಕೆಗಳಿಗೆ ಮತ್ತು ಕಾರ್ಟೂನ್ ಗಳಿಗೆ ಉತ್ತರ ನೀಡಬೇಕೆಂದು ಆದೇಶ ನೀಡಿದೆ. ಒಟ್ಟು ಆರು ವಾರಗಳ ಒಳಗಾಗಿ ನೋಟಿಸ್ ಗೆ ಉತ್ತರ ನೀಡಬೇಕೆಂದಿರುವ ಸುಪ್ರೀಂ ಕೋರ್ಟ್, ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಿದೆ.
ನ್ಯಾಯಾಂಗ ನಿಂದನೆ ಮಾಡಿರುವ ನಿಮ್ಮ ಕುರಿತಾದಂತೆ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುವುದರ ಕುರಿತಾದಂತೆ ಉತ್ತರ ನೀಡಬೇಕು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಕಾಮೆಡಿಯನ್ ಕುನಾಲ್ ಕಾಮ್ರಾ ಸರಣಿ ಟ್ವೀಟ್ ಗಳನ್ನು ಮಾಡಿದ್ದರು. ಈ ಟ್ವೀಟ್ ಗಳು ನ್ಯಾಯಾಂಗಕ್ಕೆ ಅಪಮಾನ ಎಸಗಿದೆ ಎಂದು ಒಟ್ಟು 8 ಮಂದಿ ಕುನಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಕುನಾಲ್ ಕಾಮ್ರಾರಂತೆಯೇ ವ್ಯಂಗ್ಯಚಿತ್ರಕಾರ್ತಿ ರಚಿತಾ ತನೇಜಾ ಸುಪ್ರೀಮ್ ಕೋರ್ಟ್ ಗೆ ಅಪಮಾನವಾಗುವಂತಹಾ ಚಿತ್ರಗಳನ್ನು ರಚಿಸಿದ್ದಾರೆಂದು ಸರಕಾರದ ಪ್ರಮುಖ ನ್ಯಾಯಾಂಗ ಅಧಿಕಾರಿ ಕೆ.ಕೆ ವೇಣುಗೋಪಾಲ್ ರವರು ತನೇಜಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮೋದನೆ ನೀಡಿದ್ದರು.