ಬಂಟ್ವಾಳ ತಾಪಂ, ಜಿಪಂ ಸದಸ್ಯರ ಸಹಿತ ಮೂವರು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ
ಬಂಟ್ವಾಳ, ಡಿ.18: ದ.ಕ. ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾವೆ ಹಾಗೂ ಅವರ ಪತಿ, ಕಾಂಗ್ರೆಸ್ ಮುಖಂಡ ಮಾಧವ ಮಾವೆ ಮತ್ತು ಇಲ್ಲಿನ ತಾಲೂಕು ಪಂಚಾಯತ್ ಕನ್ಯಾನ ಕ್ಷೇತ್ರದ ಸದಸ್ಯ ಕುಮಾರ್ ಭಟ್ ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಮಾಧವ ಮಾವೆ ಇತ್ತೀಚೆಗೆ ದಿನಗಳಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮುನಿಸಿಕೊಂಡು ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರವಾಗಿದ್ದರಲ್ಲದೆ ಅವರು ಇತ್ತೀಚೆಗೆ ಬಿಜೆಪಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತಾನು ಕಾಂಗ್ರೆಸ್ ನ ಕೆಲವು ನಾಯಕರ ಬಗ್ಗೆ ಅಸಮಾಧಾನಗೊಂಡಿದ್ದು ಬಿಜೆಪಿ ಸೇರುವುದಾಗಿ ಕೆಲವು ಸಮಯದ ಹಿಂದೆ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಅದರಂತೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.
ಮಾಧವ ಮಾವೆ ಅವರ ಪತ್ನಿ ಮಂಜುಳಾ ಮಾವೆ ಕಾಂಗ್ರೆಸ್ ನಿಂದ ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾದವರು. ಮಾಜಿ ಸಚಿವ ಬಿ.ರಮಾನಾಥ ರೈಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಂಜುಳಾ ಮಾವೆ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿದ್ದರು. ಆದರೆ ಇಂದು ಪತಿಯೊಂದಿಗೆ ಒಂದೇ ವೇದಿಕೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ತಾಲೂಕು ಪಂಚಾಯತ್ ಕಾಂಗ್ರೆಸ್ ಸದಸ್ಯ ಕುಮಾರ್ ಭಟ್ ಕೂಡಾ ಇತ್ತೀಚಿಗೆ ವಿಟ್ಲದಲ್ಲಿ ಸುದ್ದಿಗೋಷ್ಠಿ ನಡೆಸಿ ಪಕ್ಷದ ನಾಯಕರ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಇಂದು ಅವರು ಮಂಗಳೂರಿನಲ್ಲಿ ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ.
ಕಾಂಗ್ರೆಸ್ ನ ಪಕ್ಷದ ಕಾರ್ಯಕರ್ತರಾಗಿದ್ದ ಹನೀಫ್ ಪಾಜಪಳ್ಳ ಹಾಗೂ ಅವರ ಬೆಂಬಲಿಗರು ಕೂಡಾ ಇದೇ ವೇಳೆ ಬಿಜೆಪಿಗೆ ಸೇರ್ಪಡೆ ಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳೇಪಾಡಿ, ಬಿಜೆಪಿ ಮುಖಂಡರಾದ ಕಸ್ತೂರಿ ಪಂಜ, ಜಗದೀಶ್ ಶೇಣವ, ರವಿಶಂಕರ್ ಮಿಜಾರ್, ರಾಜೇಶ್ ಕಾವೇರಿ, ಸುಧೀರ್ ಶೆಟ್ಟಿ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು.