×
Ad

‘ಪತ್ರಿಕೋದ್ಯಮದ ಮೂಲತತ್ವಗಳ ಎತ್ತಿಹಿಡಿಯುವುದು ಇಂದಿನ ಅಗತ್ಯ’

Update: 2020-12-18 18:33 IST

ಮಣಿಪಾಲ, ಡಿ.18: ಮಾದ್ಯಮ ಕ್ಷೇತ್ರದ ಪುನರುಜ್ಜೀವನಕ್ಕಾಗಿ ಪತ್ರಿಕೋದ್ಯಮದ ಮೂಲತತ್ವಗಳನ್ನು ಎತ್ತಿಹಿಡಿಯುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಅಭಿಪ್ರಾಯಪಟ್ಟಿದ್ದಾರೆ.

ಮಾಹೆ ವಿವಿಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ) ವತಿಯಿಂದ ಮಾಹೆಯ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ 6ನೇ ಎಂ.ವಿ.ಕಾಮತ್ ದತ್ತಿ ಉಪನ್ಯಾಸದಲ್ಲಿ ‘ಪತ್ರಿಕೋದ್ಯಮ: ಭೂತ, ವರ್ತಮಾನ ಮತ್ತು ಭವಿಷ್ಯ’ ಎಂಬ ವಿಷಯದ ಮೇಲೆ ಅವರು ಹೈದರಾಬಾದ್‌ನಿಂದ ವರ್ಚುವಲ್ ಮಾದರಿಯಲ್ಲಿ ಮಾತನಾಡಿದರು.

ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವುದಕ್ಕಾಗಿ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ಪತ್ರಿಕಾ ಕ್ಷೇತ್ರದ ಇಂದಿನ ಅತೀ ದೊಡ್ಡ ಆತಂಕವಾಗಿದೆ. ಪತ್ರಿಕೋದ್ಯಮ ಇಂದು ಸಾಗುತ್ತಿರುವ ರೀತಿ ನನಗೆ ತುಂಬಾ ಕಳವಳವನ್ನುಂಟು ಮಾಡಿದೆ ಎಂದು ಹೇಳಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪುರಾವೆ ಸಹಿತ ವಿಶ್ಲೇಷಣಾತ್ಮಕ ವರದಿಗಳ ಮೂಲಕ ಸರಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಂತೆ ಇರುವುದು ಪತ್ರಿಕೆಗಳ ಜವಾಬ್ದಾರಿಯಾಗಿದೆ ಎಂದರು.

ಆದರೆ ಪ್ರಸಕ್ತ ಚಾಲನೆಯಲ್ಲಿರುವ ಪತ್ರಿಕೋದ್ಯಮ ನೈತಿಕ ನಿರೀಕ್ಷೆಗಳನ್ನೆಲ್ಲಾ ಮೀರುತಿದ್ದು, ಸುದ್ದಿ ಮತ್ತು ಫೇಕ್ ಸುದ್ದಿಗಳ ನಡುವಿನ ಗೆರೆ ಅತ್ಯಂತ ತೆಳು ವಾಗಿದೆ. ತಾಂತ್ರಿಕ ಕ್ಷೇತ್ರದಲ್ಲಾಗುತ್ತಿರುವ ನವನವೀನ ಕ್ರಾಂತಿಗಳಿಂದಾಗಿ ಇಂದು ಸ್ಪರ್ಧೆ ಎಂಬುದು ಅತ್ಯಂತ ತೀವ್ರತೆಯನ್ನು ಪಡೆದಿದ್ದು ಇದರಿಂದ ವರದಿಗಳು ಅತಿರಂಜಿತ ಹಾಗೂ ಸೆನ್ಸೆಶನ್‌ನಿಂದ ಕೂಡಿರುತ್ತವೆ ಎಂದು ಅವರು ವಿಷಾಧಿಸಿದರು.

ಇಂದಿನ ಪತ್ರಿಕೋದ್ಯಮದ ಮತ್ತೊಂದು ಪಿಡುಗಾದ ಪೆಯ್ಡ್ ಸುದ್ದಿಗಳು, ಲಾಭಗಳಿಸುವ ಮೂಲ ಉದ್ದೇಶ(ಎಜೆಂಡಾ)ವನ್ನು ಹೊಂದಿದ್ದು, ಇದರಲ್ಲಿ ಕುಸಿಯುತ್ತಿರುವ ಮೌಲ್ಯಗಳು ತೀರಾ ಕಳವಳದಾಯಕವಾಗಿದೆ ಎಂದು ವೆಂಕಯ್ಯ ನಾಯ್ಡು ನುಡಿದರು.

ಪತ್ರಿಕಾ ಸ್ವಾತಂತ್ರ: ಪತ್ರಿಕಾ ಸ್ವಾತಂತ್ರಕ್ಕೆ ಒತ್ತು ಕೊಟ್ಟು ಮಾತನಾಡಿದ ಉಪರಾಷ್ಟ್ರಪತಿಗಳು, ಪತ್ರಿಕಾ ಸ್ವಾತಂತ್ರ ಎಂಬುದು ಅನಿವಾರ್ಯತೆಯಾಗಿದೆ. ಆದರೆ ಈ ಸ್ವಾತಂತ್ರವು ಜವಾಬ್ದಾರಿಯೊಂದಿಗೆ ಬರುತ್ತದೆ. ಅದನ್ನು ಆದ್ಯತೆಯ ಮೇಲೆ ಹೊಂದಬೇಕಾಗಿದೆ. ಇಂದು ನಾಯಿಕೊಡೆಗಳಂತೆ ಪತ್ರಿಕಾ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿರುವುದು ಮೌಲ್ಯಗಳು ಕುಸಿಯಲು ಪ್ರಮುಖ ಕಾರಣ ಎಂದರು.

ಇತ್ತೀಚೆಗೆ ಮಾಧ್ಯಮಲೋಕದಲ್ಲಿ ಭಾರೀ ವಿವಾದಕ್ಕೆ ಕಾರಣವಾದ ಹಿಂದಿ ಚಲನಚಿತ್ರ ನಟರೊಬ್ಬರ ಆತ್ಮಹತ್ಮೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಚಾರ ತಂತ್ರಕ್ಕೆ (ಪ್ರೊಪಗಾಂಡ) ಇದೊಂದು ಉದಾಹರಣೆ ಎಂದರು. ತಪ್ಪು ಉದ್ದೇಶಗಳಿಗಾಗಿ ಮಾಧ್ಯಮಗಳು ಇಲ್ಲಿ ಧರ್ಮ ಎತ್ತಿಹಿಡಿಯುವ (ಕ್ರುಸೇಡರ್) ಪಾತ್ರ ನಿರ್ವಹಿಸಿರುವುದು ಅತ್ಯಂತ ಕಳವಳಕರ ಸಂಗತಿ ಎಂದರು.

ಸುದ್ದಿಸಂಗ್ರಹದ ಮತ್ತು ಅದನ್ನು ಪ್ರಸ್ತುತ ಪಡಿಸುವ ವಿಧಾನವೇ ಇಂದು ಅಪಮೌಲ್ಯಗೊಂಡಿದೆ. ಸುದ್ದಿ ಮತ್ತು ಅಭಿಪ್ರಾಯಗಳು ಎಂದೆಂದೂ ಬೇರೆ ಆಗಿಯೇ ಉಳಿಯಬೇಕು ಎಂದು ಹೇಳಿದ ವೆಂಕಯ್ಯ ನಾಯ್ಡು, ನಾಡಿನ ಪ್ರಮುಖ ಪತ್ರಕರ್ತರಾಗಿದ್ದ ಎಂ.ವಿ.ಕಾಮತ್ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಸ್ವಾತಂತ್ರಪೂರ್ವ ಹಾಗೂ ಸ್ವಾತಂತ್ರಾ ನಂತರದ ಭಾರತದಲ್ಲಿ ಅವರು ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಎಂಐಸಿಯ ಗೌರವ ನಿರ್ದೇಶಕರಾಗಿದ್ದ ಎಂ.ವಿ.ಕಾಮತ್‌ರ ಕುರಿತು ಮಾತನಾಡಿದರು. ಮಾಹೆಯ ಪ್ರೊ. ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಎಂಐಸಿಯ ಗೌರವ ನಿರ್ದೇಶಕರಾಗಿದ್ದ ಎಂ.ವಿ.ಕಾಮತ್‌ರ ಕುರಿತು ಮಾತನಾಡಿದರು. ಎಂಐಸಿ ನಿರ್ದೇಶಕಿ ಡಾ.ಪದ್ಮಾರಾಣಿ ಅತಿಥಿಗಳನ್ನು ಸ್ವಾಗತಿಸಿದರೆ, ಪ್ರಾಧ್ಯಾಪಕಿ ಮಂಜುಳಾ ವೆಂಕಟ ರಾಘವನ್ ಉಪರಾಷ್ಟ್ರಪತಿಗಳನ್ನು ಪರಿಚಯಿಸಿದರು. ಶ್ರುತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಅನುಪಾ ಲೂವಿಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News