×
Ad

ಮಣಿಪಾಲ ಕೆಎಂಸಿ: ಪ್ರೀಮಿಯಂ ಕ್ಯಾನ್ಸರ್ ಸೇವಾ ಕ್ಲಿನಿಕ್ ಉದ್ಘಾಟನೆ

Update: 2020-12-18 18:35 IST

ಉಡುಪಿ, ಡಿ.18: ದೀರ್ಘಕಾಲೀನ ಮತ್ತು ಹಸ್ತಕ್ಷೇಪಿತ (ಇಂಟರ್ವೆನ್ಷನಲ್) ನೋವಿಗೆ ಸಂಬಂಧಿಸಿದ ವಿಶೇಷ ಚಿಕಿತ್ಸಾಲಯ ಹಾಗೂ ಪ್ರೀಮಿಯಂ ಕ್ಯಾನ್ಸರ್ ಸೇವಾ ಕ್ಲಿನಿಕ್ ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ಮಂಗಳವಾರ ಉದ್ಘಾಟನೆಗೊಂಡಿತು.

ವಿಶೇಷ ಚಿಕಿತ್ಸಾಲಯವನ್ನು ಉದ್ಘಾಟಿಸಿದ ಮಣಿಪಾಲ ಮಾಹೆಯ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ.ಪಿ.ಎಲ್.ಎನ್.ಜಿ.ರಾವ್ ಮಾತನಾಡಿ, ನೋವು ಮತ್ತು ಕ್ಯಾನ್ಸರ್ ಎರಡು ಕಾಯಿಲೆಗಳಾಗಿವೆ. ಹೀಗಾಗಿ ರೋಗಿಗೆ ಚಿಕಿತ್ಸೆ ನೀಡುವಾಗ ಬಹುಶಿಸ್ತೀಯ ವಿಧಾನದ ಅಗತ್ಯ ವಿದೆ. ಹೊಸ ವಿಭಾಗವು ಕ್ಯಾನ್ಸರ್ ರೋಗಿಗಳಿಗೆ ಮಾತ್ರವಲ್ಲದೇ ದೀರ್ಘಕಾಲದ ನೋವಿನಿಂದ ನರಳುವ ಇತರ ರೋಗಿಗಳ ಅಗತ್ಯತೆಯನ್ನು ಪೂರೈಸಲಿದೆ ಎಂದರು.

ಕ್ಯಾನ್ಸರ್ ಸೇವಾ ಕ್ಲಿನಿಕ್‌ನ್ನು ಉದ್ಘಾಟಿಸಿದ ಜಮ್‌ಷೆಡ್‌ಪುರದ ಮಣಿಪಾಲ್ ಟಾಟಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಪೂರ್ಣಿಮಾ ಬಾಳಿಗಾ ಮಾತನಾಡಿ, ಈಗ ಪ್ರಾರಂಭಿಸಿರುವ ಸೇವಾ ಕ್ಲಿನಿಕ್‌ನಿಂದ ರೋಗಿಗಳಿಗೆ ಹೆಚ್ಚಿನ ಕಾಯುವಿಕೆ ಅಗತ್ಯವಿಲ್ಲದೇ, ವೈದ್ಯಕೀಯ ಸಮಾಲೋಚನೆ ಹಾಗೂ ಚಿಕಿತ್ಸೆ ದೊರೆಯಲಿದೆ ಎಂದರು.

ಕೆಎಂಸಿಯ ಡೀನ್ ಡಾ.ಶರತ್‌ಕುಮಾರ್ ರಾವ್, ಕೆಎಂಸಿ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ, ಮಣಿಪಾಲದ ದಂತ ವಿಜ್ಞಾನ ವಿಭಾಗದ ಡೀನ್ ಡಾ.ಕೀರ್ತಿಲತಾ ಪೈ, ಮಣಿಪಾಲ ಹೆಲ್ತ್ ಪ್ರೊಫೆಶನ್‌ನ ಈನ್ ಡಾ. ಅರುಣ್ ಮಯ್ಯ, ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕ ಡಾ.ನವೀನ್ ಎಸ್. ಸಲಿನ್ಸ್ ಉಪಸ್ಥಿತರಿದ್ದರು.

ಡೀನ್ ಡಾ.ಶರತ್ ‌ಕುಮಾರ್ ರಾವ್ ಸ್ವಾಗತಿಸಿದರೆ, ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವಂದಿಸಿದರು. ಪ್ರಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮಾಯಾಂಕ್ ಗುಪ್ತ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೂರು ತಿಂಗಳುಗಳಿಗಿಂತ ಹೆಚ್ಚು ಕಾಲ ಎಡೆಬಿಡದೆ ಕಾಡುವ ದೀರ್ಘಕಾಲದ ನೋವನ್ನು ಒಂದು ರೋಗವೆಂದು ಪರಿಗಣಿಸಲಾಗುತ್ತದೆ. ಈ ನೋವು ಯಾವುದೇ ಭಾಗದಲ್ಲೂ -ಚರ್ಮ, ಸ್ನಾಯು, ಕೀಲುಗಳು, ಮೂಳೆ, ನರಗಳು, ಒಳಭಾಗದ ಅಂಗಗಳು- ಉಂಟಾಗಬಹುದು. ಇವುಗಳಿಗೆ ಸ್ಪಷ್ಟವಾದ ಕಾರಣಗಳಿರುವುದಿಲ್ಲ. ಆದರೆ ಈ ನೋವನ್ನು ಒಂದು ಕಾಯಿಲೆಯಾಗಿ ಪರಿಗಣಿಸಲಾಗುತ್ತದೆ. ಈ ನೋವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಹಾಗೂ ಅಂಥವರ ಜೀವನ ಗುಣಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಈ ಕ್ಲಿನಿಕ್ ಹೊಂದಿದೆ ಎಂದು ಡಾ.ನವೀನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News