ಉಡುಪಿ ಗ್ರಾಪಂ ಚುನಾವಣೆ: ಎರಡನೇ ಹಂತದಲ್ಲಿ 68 ನಾಮಪತ್ರ ತಿರಸ್ಕೃತ
ಉಡುಪಿ, ಡಿ.18: ಜಿಲ್ಲೆಯ ಕುಂದಾಪುರ, ಕಾರ್ಕಳ ಹಾಗೂ ಕಾಪು ತಾಲೂಕು ವ್ಯಾಪ್ತಿಯ ಒಟ್ಟು 86 ಗ್ರಾಪಂಗಳ 1243 ಸ್ಥಾನಗಳಿಗೆ ಡಿ.27ರಂದು ನಿಗದಿ ಯಾಗಿರುವ ಎರಡನೇ ಹಂತದ ಚುನಾವಣೆಗೆ ಸಲ್ಲಿಸಲಾಗಿರುವ 3380 ನಾಮಪತ್ರಗಳಲ್ಲಿ 68 ತಿರಸ್ಕೃತವಾಗಿದ್ದು, 3298 ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.
ಕುಂದಾಪುರ ತಾಲೂಕಿನಲ್ಲಿ 35 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 1544 ಕ್ರಮಬದ್ಧವಾಗಿದ್ದರೆ, ಕಾರ್ಕಳ ತಾಲೂಕಿನಲ್ಲಿ 18 ನಾಮಪತ್ರಗಳು ತಿರಸ್ಕೃತ ಗೊಂಡು 1004 ಹಾಗೂ ಕಾಪು ತಾಲೂಕಿನಲ್ಲಿ 15 ನಾಮಪತ್ರಗಳು ತಿರಸ್ಕೃತಗೊಂಡು 750 ನಾಮಪತ್ರಗಳು ಕ್ರಮಬದ್ಧವಾಗಿವೆ.
ಕುಂದಾಪುರ ತಾಲೂಕಿನ 43 ಗ್ರಾಪಂಗಳ 554 ಸ್ಥಾನಗಳಿಗೆ, ಕಾರ್ಕಳ ತಾಲೂಕಿನ 27 ಗ್ರಾಪಂಗಳ 399 ಹಾಗೂ ಕಾಪು ತಾಲೂಕಿನ 16 ಗ್ರಾಪಂ ಗಳ 290 ಸ್ಥಾನಗಳಿಗೆ ಡಿ.27ರಂದು ಚುನಾವಣೆ ನಡೆಯಲಿದೆ. ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಡಿ.19 ಕೊನೆಯದಿನವಾಗಿದ್ದು, ನಾಳೆ ಸಂಜೆಯ ವೇಳೆ ಸ್ಪಧಾಕರ್ಣದ ಸ್ಪಷ್ಟ ಚಿತ್ರಣ ದೊರೆಯಲಿದೆ.