ರಸ್ತೆ ಅತಿಕ್ರಮಿಸಿ ಪಾರ್ಕಿಂಗ್; ವಾಣಿಜ್ಯ ಸಂಕೀರ್ಣಗಳ ಮಾಲಕರಿಗೆ ನೋಟಿಸ್ : ‌ಪೊಲೀಸ್ ಆಯುಕ್ತ ವಿಕಾಶ್ ಕುಮಾರ್

Update: 2020-12-18 14:15 GMT

‌ಮಂಗಳೂರು, ಡಿ.18: ನಗರ ವ್ಯಾಪ್ತಿಯ ವಾಣಿಜ್ಯ ಸಂಕೀರ್ಣಗಳ ಮುಂದೆ ಫುಟ್‌ಪಾತ್ ಹಾಗು ರಸ್ತೆಯನ್ನು ಅತಿಕ್ರಮಿಸಿ ಪಾರ್ಕಿಂಗ್ ಮಾಡಿರುವ ಜಾಗವನ್ನು ತೆರವು ಮಾಡಲು ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ತಿಳಿಸಿದ್ದಾರೆ.

ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಾದಕ ದ್ರವ್ಯ ವಿರೋಧಿ ಸಪ್ತಾಹದ ಅಂಗವಾಗಿ ಶುಕ್ರವಾರ ನಡೆದ ‘ಫೋನ್‌ಇನ್’ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಈಗಾಗಲೇ ನಗರದ 50 ಕಡೆಗಳಲ್ಲಿ ಆಕ್ರಮಿತ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ. ತೆರವು ಮಾಡಿಸು ವಂತೆ ಮಹಾ ನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ. ಎರಡು ತಿಂಗಳಾದರೂ ಅವರಿಂದ ಯಾವುದೇ ಸ್ಪಂದನೆ ಸಿಗದಿರುವುದರಿಂದ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಿ ತೆರವು ಮಾಡಲು ಸೂಚನೆ ನೀಡಲಾಗುವುದು. ಆ ಬಳಿಕವೂ ತೆರವು ಮಾಡದಿದ್ದರೆ ಮಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ಫೋನ್ ಇನ್ ಕಾರ್ಯಕ್ರಮಕ್ಕೆ ಸಿಗದ ಸ್ಪಂದನೆ: ವರ್ಷಗಳ ಬಳಿಕ ಪೊಲೀಸ್ ಆಯುಕ್ತರು ಫೋನ್ ಇನ್ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಿದ್ದರೂ ಕೂಡ ಹೆಚ್ಚಿನ ಸ್ಪಂದನೆ ಸಿಗಲಿಲ್ಲ. 11ರಿಂದ 12ರ ಮಧ್ಯೆ ಕೇವಲ 5 ಕರೆಗಳು ಮಾತ್ರ ಬಂದಿದ್ದವು. ಆ ಪೈಕಿ ಹೆಚ್ಚಿನವುಗಳು ಟ್ರಾಫಿಕ್ ಸಮಸ್ಯೆಯದ್ದಾಗಿತ್ತು. ನಗರದ ಲಾಲ್‌ಭಾಗ್ ಸಾಯಿಬಿನ್ ಕಾಂಪ್ಲೆಕ್ಸ್ ಎದುರು ಪುಟ್‌ಪಾತ್ ಮೇಲೆಯೇ ವಾಹನ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು. ತಕ್ಷಣ ಅಲ್ಲಿಗೆ ಸಂಚಾರ ಪೊಲೀಸರನ್ನು ಕಳುಹಿಸಿ ತೆರವು ಮಾಡಲು ಕಮಿಷನರ್ ಸೂಚಿಸಿದರು. ಉರ್ವ ಮಾರ್ಕೆಟ್‌ನಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುವು ದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ. ಸಿಟಿ ಬಸ್‌ಗಳನ್ನು ಮಾರ್ಗದ ನಡುವೆಯೇ ನಿಲ್ಲಿಸಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ದೂರಿದರು.

ತಕ್ಷಣ ಕಮಿಷನರ್ ಸಂಚಾರ ವಿಭಾಗದ ಎಸಿಪಿ ನಟರಾಜ್ ಅವರನ್ನು ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಸೂಚಿಸಿದರು.

ಕೊಟ್ಟಾರ ಚೌಕಿಯಲ್ಲಿ ವೇಗ ನಿಯಂತ್ರಕ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಳೂರು ಕಡೆಯಿಂದ ಬಸ್ ಮತ್ತಿತರ ವಾಹನಗಳು ಅತಿ ವೇಗದಿಂದ ಬರುವುದರಿಂದ ಕೊಟ್ಟಾರಚೌಕಿಯಲ್ಲಿ ರಸ್ತೆ ದಾಟಲು ಕಷ್ಟವಾಗುತ್ತಿದೆ. ಅಲ್ಲಿ ವೇಗ ನಿಯಂತ್ರಕ ಅಳವಡಿಸಬೇಕು ಎಂದು ಸಾರ್ವಜನಿಕರೊಬ್ಬರು ಸಲಹೆ ನೀಡಿದರು. ಸ್ಥಳ ಅಪಾಯಕಾರಿಯಾಗಿರುವುದರಿಂದ ಅಲ್ಲಿ ಯಾವ ರೀತಿಯಲ್ಲಿ ವೇಗ ನಿಯಂತ್ರಕ ಅಳವಡಿಸಬಹುದು ಎಂಬುದನ್ನು ಪರಿ ಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ಸಂಚಾರ ವಿಭಾಗದ ಎಸಿಪಿಗೆ ಸೂಚನೆ ನೀಡಿದರು.

112ಕ್ಕೆ ಉತ್ತಮ ಸ್ಪಂದನೆ

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿ.14ರಂದು ಆರಂಭಗೊಂಡ 112 ತುರ್ತು ಕರೆಗೆ ಉತ್ತಮ ಸ್ಪಂದನೆ ವ್ಯಕ್ತ ವಾಗಿದೆ. ನಾಲ್ಕು ದಿನಗಳ ಅವಧಿಯಲ್ಲಿ ಒಟ್ಟು 91 ಕರೆಗಳು ಬಂದಿವೆ. ಈ ಪೈಕಿ ಒಂದು ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಾಗಿದೆ.

ಉಳಿದವುಗಳನ್ನು ಸ್ಥಳದಲ್ಲೇ ಪೊಲೀಸರು ತಕ್ಷಣ ಭೇಟಿ ಇತ್ಯರ್ಥ ಪಡಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದ್ದಾರೆ. ಕುಲಶೇಖರದಲ್ಲಿ ದಂಪತಿಯ ಜಗಳ ತಾರಕಕ್ಕೇರಿದ್ದು, ಕರೆ ಬಂದ ತಕ್ಷಣ ಅಲ್ಲಿಯೇ ಸಮೀಪದಲ್ಲಿದ್ದ ಹೊಯ್ಸಳ ವಾಹನ 5 ನಿಮಿಷದೊಳಗೆ ಸ್ಥಳಕ್ಕೆ ತಲುಪಿದೆ. ಪೊಲೀಸರು ದಂಪತಿಯನ್ನು ಸಮಾಧಾನಪಡಿಸಿ ಅನ್ಯೋನ್ಯತೆಯಿಂದ ಇರುವಂತೆ ಸೂಚಿಸಿ ಅವರ ವೈಮನಸ್ಸನ್ನು ತಿಳಿಗೊ ಳಿಸಿ ಬಂದಿದ್ದಾರೆ. ನೆರೆ ಮನೆಯ ಜಗಳ, ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ, ಆತ್ಮಹತ್ಯೆ ಸೇರಿದಂತೆ ಬಂದ ತುರ್ತು ಕರೆಗಳಿಗೆ ತಕ್ಷಣಕ್ಕೆ ಸ್ಪಂದಿಸಲಾಗಿದೆ ಎಂದು ವಿಕಾಶ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News