×
Ad

ಮುಂದಿನ ವರ್ಷ ಭಾರತದಲ್ಲಿ 30 ಕೋಟಿ ಸ್ಪುಟ್ನಿಕ್ V ಲಸಿಕೆ ಉತ್ಪಾದನೆ

Update: 2020-12-18 20:57 IST

ಹೊಸದಿಲ್ಲಿ,ಡಿ.18: ರಶ್ಯದ ಸ್ಪುಟ್ನಿಕ್ V  ಕೊರೋನ ಲಸಿಕೆಗಳ 30 ಕೋಟಿ ಡೋಸ್‌ಗಳನ್ನು ಭಾರತವು ಮುಂದಿನ ವರ್ಷ ಉತ್ಪಾದಿಸಲಿದ್ದು, ಇದು ಈ ಹಿಂದೆ ಮಾಡಿಕೊಳ್ಳಲಾದ ಒಪ್ಪಂದಕ್ಕಿಂತ ಮೂರು ಪಟ್ಟು ಅಧಿಕವೆಂದು ರಶ್ಯದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಭಾರತದಲ್ಲಿ ಉತ್ಪಾದಿಸಲಾದ ಸ್ಪುಟ್ನಿಕ್  V    ಲಸಿಕೆಗಳ ಮೊದಲ ಮಾದರಿಗಳನ್ನು ರಶ್ಯವು ಈಗಾಗಲೇ ಪರೀಕ್ಷಿಸಿದೆಯೆಂದು ಹೊಸದಿಲ್ಲಿಯಲ್ಲಿರುವ ರಶ್ಯನ್ ರಾಯಭಾರಿ ಕಚೇರಿ ಶುಕ್ರವಾರ ಟ್ವೀಟ್ ಮಾಡಿದೆ.

 ‘‘ಭಾರತದಲ್ಲಿ ಸ್ಪುಟ್ನಿಕ್ V    ಲಸಿಕೆಗಳನ್ನು ಉತ್ಪಾದನೆಗಾಗಿ , ರಶ್ಯವು ನಾಲ್ವರು ಬೃಹತ್ ಉತ್ಪಾದಕ ಸಂಸ್ಥೆಗಳ ಜೊತೆ ಒಡಂಬಡಿಕೆಗಳನ್ನು ಮಾಡಿಕೊಂಡಿದೆ ಎಂದು ರಶ್ಯದ ನೇರ ಹೂಡಿಕೆ ನಿಧಿಯ ವರಿಷ್ಠ ಡಿಮಿಟ್ರಿಯೆವ್, ರೊಸ್ಸಿಯಾ 24 ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆಂದು ತಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾರತವು ಮುಂದಿನ ವರ್ಷ 30 ಕೋಟಿಗೂ ಅಧಿಕ ಲಸಿಕೆಗಳನ್ನು ಉತ್ಪಾದಿಸಲಿದೆ ಎಂದು ಅದು ತಿಳಿಸಿದೆ. ಭಾರತದ ಹೊರಗಡೆ ನಡೆಸಲಾದ ಸ್ಪುಟ್ನಿಕ್ V ಲಸಿಕೆಗಳ ಪ್ರಾಯೋಗಿಕ ಪರೀಕ್ಷೆಯು ಶೇ.91ರಷ್ಟು ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆಯೆಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಸ್ಪುಟ್ನಿಕ್ V   ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ರೆಡ್ಡೀಸ್ ಲ್ಯಾಬೋರೇಟರೀಸ್ ನಡೆಸಲಿದೆ ಹಾಗೂ ಅದರ ವಿತರಣೆಯ ಹೊಣೆಗಾರಿಕೆಯನ್ನು ವಹಿಸಲಿದೆ. ಆದರೆ ಯಾವ ಕಂಪೆನಿಗಳು ಲಸಿಕೆಯನ್ನು ಉತ್ಪಾದಿಸಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News